ಬಾಗಲಕೋಟೆ : ರಾತ್ರಿ ಮಲಗಿದ್ದವನನ್ನು ಎಬ್ಬಿಸಿ ಮಂತ್ರಿ ಸ್ಥಾನ ನೀಡಿ, ಡಿಸಿಎಂ ಮಾಡಿದರು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ನಿನ್ನೆ ರಾತ್ರಿ ರಬಕವಿ-ಬನಹಟ್ಟಿ ತಾಲ್ಲೂಕಿನ ಹಳಂಗಳಿ ಭದ್ರಗಿರಿ ಬೆಟ್ಟದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಮಂತ್ರಿ ಆಗಬೇಕು ಎಂಬ ಆಸೆ ಇರಲಿಲ್ಲ. ನಾನು ಮಂತ್ರಿ ಆಗುತ್ತೇನೆ ಎಂಬ ನಂಬಿಕೆನೂ ಇರಲಿಲ್ಲ. ಆದರೆ ಮಧ್ಯರಾತ್ರಿ 2ಗಂಟೆ ಸುಮಾರಿಗೆ ನನಗೆ ಕರೆ ಮಾಡಿ ಮಲಗಿದ್ದವನನ್ನು ಎಬ್ಬಿಸಿ ಮಂತ್ರಿ ಸ್ಥಾನ ನೀಡಿದರು. ಲಕ್ಷ್ಮಣ ಸವದಿ ಹಿಂದಿನ ಚುನಾವಣೆಯಲ್ಲಿ ಸೋತಿದ್ದರು ಎಂದು ಬಹಳಷ್ಟು ಜನ ಹೇಳುತ್ತಾರೆ. ಚುನಾವಣೆಯಲ್ಲಿ ಸೋತವರು ಹೇಗೆ ಮಂತ್ರಿ, ಉಪಮುಖ್ಯಮಂತ್ರಿ ಆದರು ಎಂದು ಅನೇಕರು ಆಶ್ಚರ್ಯ ಪಟ್ಟಿದ್ದರು. ಈ ಕುರಿತು ಪತ್ರಕರ್ತರು ನನ್ನ ಬಳಿ ಕೇಳಿದ್ದರು. ಆಗ ಹರ ಮುನಿದರು ಗುರು ಕಾಯುವನು ಎಂದು ಹೇಳಿದ್ದೆ. ರಾಜಕಾರಣಿಗಳಿಗೆ ಹರ ಎಂದರೆ ಮತದಾರರು. ಮತದಾರರು ಈ ಬಾರಿ ಮುನಿಸಿಕೊಂಡರು. ಆದರೆ ಕೈಹಿಡಿದು ಎತ್ತಿದವರು ಗುರುಗಳು. ಅವರ ಆಶೀರ್ವಾದದಿಂದ ನಾನು ಸೋತರೂ ಮಂತ್ರಿಯಾಗಿ ಉಪಮುಖ್ಯಮಂತ್ರಿ ಆದೆ ಎಂದರು.










