ಸಿಯಾಚಿನ್‍ನಲ್ಲಿ ಹಿಮಪಾತಕ್ಕೆ ಸಿಲುಕಿ ಇಬ್ಬರು ನಾಗರೀಕರು, ನಾಲ್ವರು ಯೋಧರು ಹುತಾತ್ಮ…

557
firstsuddi

ನವದೆಹಲಿ : ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್‍ನ ಉತ್ತರ ಭಾಗದಲ್ಲಿ ಸಂಭವಿಸಿದ ಭಾರಿ ಹಿಮಪಾತಕ್ಕೆ ಇಬ್ಬರು ನಾಗರೀಕರು ಹಾಗೂ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಸಿಯಾಚಿನ್‍ನಲ್ಲಿ ಯೋಧರು ನಿನ್ನೆ ಮಧ್ಯಾಹ್ನ ಎಂದಿನಂತೆ ಗಸ್ತು ಕಾರ್ಯ ನಡೆಸುತ್ತಿದ್ದ ಸಂದರ್ಭದಲ್ಲಿ ಹಿಮಪಾತ ಸಂಭವಿಸಿದ್ದು, 8ಕ್ಕೂ ಹೆಚ್ಚು ಯೋಧರು ಸಿಲುಕಿದ್ದರು. ಈ ವೇಳೆ ಕೂಡಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು ಕಾರ್ಯಚರಣೆ ನಡೆಸಿ ಹಿಮದಡಿ ಸಿಲುಕಿದ್ದ ದುರ್ಗ ರೆಜಿಮೆಂಟ್‍ನ 6 ಮಂದಿ ಯೋಧರು ಹಾಗೂ ಇಬ್ಬರು ನಾಗರೀಕರನ್ನು ರಕ್ಷಿಸಿ ಹೆಲಿಕಾಪ್ಟರ್ ಮೂಲಕ ಮಿಲಿಟರಿ ಆಸ್ಪತ್ರೆಗೆ ರವಾನಿಸಿದರು. ಆದರೆ ಅವರಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

2016ರಲ್ಲೂ ಹೀಗೆ ದೊಡ್ಡ ಪ್ರಮಾಣದಲ್ಲಿ ಹಿಮಪಾತ ಸಂಭವಿಸಿ ಕನಾಟಕದ ಹನುಮಂತಪ್ಪ ಕೊಪ್ಪದ ಅವರು ಆರು ದಿನಗಳ ಬಳಿಕ ಜೀವಂತವಾಗಿ ಪತ್ತೆಯಾಗಿದ್ದರು. ಆದರೂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದರು. 6ದಿನ ಸಾವು ಬದುಕಿನ ನಡುವೆ ಹೋರಾಡಿದ ವೀರ ಯೋಧ ಹನುಮಂತಪ್ಪ ಕೊಪ್ಪದ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.