ಚಿಕ್ಕಮಗಳೂರು : ಪಾಶ್ಚಾತ್ಯ ಸಂಗೀತ ಮನಸ್ಸನ್ನು ಕೆರಳಿಸಿದರೆ ದೇಶೀಯ ಸಂಗೀತ ಮನಸ್ಸನ್ನು ಮುದಗೊಳಿಸುತ್ತದೆ : ಮಲ್ಲಾರ ಕುಲಕರ್ಣಿ.

353
firstsuddi

ಚಿಕ್ಕಮಗಳೂರು : ಪಾಶ್ಚಾತ್ಯ ಸಂಸ್ಕೃತಿಯ ಗೀಳಿನಿಂದ ನಮ್ಮ ಯುವಜನತೆ ಹೊರ ಬಂದು ದೇಶೀಯ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಭಾರತೀಯ ಜೀವವಿಮಾ ನಿಗಮದ ಅಭಿವೃದ್ದಿ ಅಧಿಕಾರಿ ವಿನೀತ್‍ಕುಮಾರ್ ಸಲಹೆ ಮಾಡಿದರು.
ಸ್ವರ ಮಾಧುರ್ಯ ಸುಗಮ ಸಂಗೀತ ಸಂಘ ಹಾಗೂ ಶ್ರೀ ಆದಿ ಅನ್ನಪೂರ್ಣೇಶ್ವರಿ ಸೇವಾ ಸಮಿತಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆದಿಶಕ್ತಿ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತೀಯ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಜಗತ್ತಿನೆಲ್ಲೆಡೆ ವಿಶೇಷ ಗೌರವ ಮತ್ತು ಆದರವಿದೆ, ಪಾಶ್ಚಾತ್ಯರು ನಮ್ಮ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ ಆದರೆ ಹಿತ್ತಲಗಿಡ ಮದ್ದಲ್ಲ ಎಂಬಂತೆ ನಮ್ಮ ಯುವ ಜನತೆ ಪಾಶ್ಚಾತ್ಯ ಸಂಸ್ಕೃತಿಯ ದಾಸರಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಯುವ ಜನತೆಯ ಅನಾದರದಿಂದಾಗಿ ನಮ್ಮ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಕಣ್ಮರೆಯಾಗುತ್ತಿದೆ ಎಂದ ಅವರು ಯುವ ಜನತೆ ಅವುಗಳನ್ನು ಮೈಗೂಡಿಸಿಕೊಂಡಲ್ಲಿ ಮುಂದಿನ ತಲೆಮಾರಿಗೆ ಉಳಿಯುತ್ತದೆ ಎಂದರು.
ಶ್ರೀ ಆದಿ ಅನ್ನಪೂರ್ಣೇಶ್ವರಿ ಸೇವಾ ಸಮಿತಿಯ ಗೌರವಾಧ್ಯಕ್ಷ ಮಲ್ಲಾರ ಕುಲಕರ್ಣಿ ಮಾತನಾಡಿ ಪಾಶ್ಚಾತ್ಯ ಸಂಗೀತ ಮನಸ್ಸನ್ನು ಕೆರಳಿಸಿದರೆ ದೇಶೀಯ ಸಂಗೀತ ಮನಸ್ಸನ್ನು ಮುದಗೊಳಿಸುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ವರ ಮಾಧುರ್ಯ ಸುಗಮ ಸಂಗೀತ ಸಂಘದ ಅಧ್ಯಕ್ಷ ಜಿ.ಬಿ.ಸುರೇಶ್ ನಾಡು, ನುಡಿ, ನೆಲ, ಜಲ ಮತ್ತು ಕನ್ನಡ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶ್ರೀ ಗುರು ಕರಿಬಸವೇಶ್ವರ ದೇವಾಲಯದ ಧರ್ಮದರ್ಶಿ ವೇದಮೂರ್ತಿ ಪಂಚಾಕ್ಷರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಬಡಾವಣೆಯ ಮಸೀದಿಯ ಅಧ್ಯಕ್ಷರಾದ ಸರ್ವರ್, ಕೆ.ಪಿ.ಸೈಯದ್, ನ್ಯಾಯವಾದಿ ಚಂದ್ರು, ಕಲಾವಿದ ಬಿಳಗಲಿ ನಾಗರಾಜ್ ಉಪಸ್ಥಿತರಿದ್ದರು.
ಸಮಾರಂಭದ ನಂತರ ನಡೆದ ನಾಡಗೀತೆ, ಭಾವಗೀತೆ, ಜಾನಪದ ಗೀತೆಗಳ ಗಾಯನ ಮತ್ತು ನೃತ್ಯ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆಯಿತು.
ಗಾಯಕ ಚಂದ್ರಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು, ಸಮಿತಿಯ ಉಪಾಧ್ಯಕ್ಷ ರಂಗನಾಥ್ ಸ್ವಾಗತಿಸಿದರು, ಸಂತೋಷ್ ವಂದಿಸಿದರು.