ಮೂಡಿಗೆರೆ : ಹ್ಯಾಂಡ್‍ಪೋಸ್ಟ್ ವೃತ್ತಕ್ಕೆ ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಹೆಸರಿಡಬೇಕು ಎಂದು ಚಿಕ್ಕಮಗಳೂರು ಜಿಲ್ಲೆಯ ಸಾಹಿತ್ಯಾಸಕ್ತರು ಒತ್ತಾಯಿಸಿದ್ದಾರೆ.
ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಮಾತನಾಡಿ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರು ಮೂಡಿಗೆರೆಯಲ್ಲಿ ಬದುಕಿ ಬಾಳಿದವರು. ಹ್ಯಾಂಡ್‍ಪೋಸ್ಟ್ ಸಮೀಪದಲ್ಲಿರುವ ನಿರುತ್ತರದ ಮನೆಯಲ್ಲಿ ವಾಸವಿದ್ದು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವರ ಹೆಸರನ್ನು ಹ್ಯಾಂಡ್ ಪೋಸ್ಟ್ ವೃತ್ತಕ್ಕೆ ಇಟ್ಟರೇ ಮೂಡಿಗೆರೆಯ ಜನತೆ ತೇಜಸ್ವಿಯವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ವೃತ್ತಕ್ಕೆ ತೇಜಸ್ವಿಯವರ ಹೆಸರಿಡುವಂತೆ ಹಳೆಮೂಡಿಗೆರೆ ಗ್ರಾ.ಪಂಗೆ ಮೂಡಿಗೆರೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮನವಿಯನ್ನು ಕೂಡ ನೀಡಲಾಗಿದೆ ಎಂದರು.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ಮೂಲಕ ಧರ್ಮಸ್ಥಳ ಹೊರನಾಡು, ಕುದುರೆಮುಖ ಮುಂತಾದ ಪ್ರವಾಸಿತಾಣಗಳಿಗೆ ರಾಜ್ಯದ ವಿವಿದೆಡೆಯಿಂದ ಬರುವ ಪ್ರವಾಸಿಗರು ಮೂಡಿಗೆರೆ ಹ್ಯಾಂಡ್‍ಪೋಸ್ಟ್ ಎಂಬ ಹೆಸರು ಕೇಳಿದೊಡನೆ ತೇಜಸ್ವಿಯವರನ್ನು ನೆನೆಪಿಸಿಕೊಳ್ಳುತ್ತಾರೆ. ಆದ್ದರಿಂದ ಮೂಡಿಗೆರೆ ಹ್ಯಾಂಡ್‍ಪೋಸ್ಟ್ ವೃತ್ತಕ್ಕೆ ತೇಜಸ್ವಿ ಹೆಸರಿಡುವುದು ಅತ್ಯಂತ ಸೂಕ್ತವಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಾಹಿತ್ಯಾಸಕ್ತರು ಒತ್ತಾಯಿಸಿದ್ದಾರೆ.










