ಬಾನಂಗಳದಲ್ಲಿ ಬೆಳ್ಳಕ್ಕಿಗಳ ಸಂಚಾರ, ನೋಡುಗರ ಕಣ್ಣಿಗೆ ಚೆಲುವಿನ ಚಿತ್ತಾರ…

550
firstsuddi

 

  • ರಾಘವೇಂದ್ರ ಕೆಸವಳಲು

ಆಕಾಶ, ರಸ್ತೆಬದಿಯ ಮರ, ಗಿಡ-ಘಂಟೆಗಳ ಮೇಲೆ ಒಂದೋ ಎರಡೋ ಬೆಳ್ಳಕ್ಕಿಗಳನ್ನ ಕಂಡರೆ ಮನಸ್ಸು ಖುಷಿಯಾಗುತ್ತೆ. ವ್ಹಾವ್ ಅಂತ ಉದ್ಘರಿಸುತ್ತೆ. ಯಾಕೆಂದರೆ, ಇತ್ತೀಚೆಗೆ ಹಲವು ಪ್ರಾಣಿ-ಪಕ್ಷಿಗಳ ಸಂತತಿಯೇ ಕಣ್ಮರೆಯಾಗ್ತಿದೆ. ಹತ್ತಾರು ಬೆಳಕ್ಕಿಗಳನ್ನ ಒಮ್ಮೆಲೆ ನೋಡೋದು ಆಧುನಿಕ ಜಗತ್ತಿನಲ್ಲಿ ಕಷ್ಟಸಾಧ್ಯ. ಆದರೆ, ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಇಟ್ಟಿಗೆ-ಸಿಗೋಡೋ ಗ್ರಾಮದಲ್ಲಿ ಒಂದಲ್ಲ, ಎರಡಲ್ಲ ಸಾವಿರಾರು ಬೆಳ್ಳಕ್ಕಿಗಳನ್ನ ಕಾಣಬಹುದು. ಹಣ ಕೊಟ್ಟರೂ ಇಂತಹಾ ಅದ್ಭುತವಾದ ತಾಣ ನೋಡಸಿಗದು. ಹೀಗಿರುವಾಗ, ಇಟ್ಟಿಗೆ-ಸಿಗೋಡು ಗ್ರಾಮದಲ್ಲಿ ಸೃಷ್ಠಿಯಾಗಿರೋ ಬೆಳ್ಳಕ್ಕಿಗಳ ಪ್ರಪಂಚವನ್ನ ನೋಡಿದ ಜನ ಮೂಕವಿಸ್ಮಿತರಾಗ್ತಿದ್ದಾರೆ. ಬೆಳ್ಳಕ್ಕಿಗಳ ವೈಭವ ಹಾಗೂ ಕಣ್ಣಾಮುಚ್ಚಾಲೆ ಆಟವನ್ನ ನೋಡೋರಿಗೂ ಕೂಡ ಪಕ್ಷಿಗಳಂತೆ ಹಾರಾಡಬೇಕು ಅನ್ನಿಸುತ್ತಿದೆ.

ಆಕಾಶದಲ್ಲೊಂದು ಬೆಳ್ಳಕ್ಕಿಗಳ ಬಾನು. ಆ ಬಾನಂಗಳದಲ್ಲಿ ಸಾವಿರಾರು ಬೆಳ್ಳಕ್ಕಿಗಳ ಹಿಂಡು. ಗುಂಪಾಗಿ ಹಾರಾಡ್ತಾ ಆಗಸದಲ್ಲಿ ರಂಗೋಲೆ ಬಿಡಿಸ್ತಿರೋ ಬೆಳ್ಳಕ್ಕಿಗಳ ಸಾಲು. ನೋಡುಗರ ಕಣ್ಣಿಗೆ ಹಸಿರ ವನದೇವಿಗೆ ಮಲ್ಲಿಗೆಯ ಪುಷ್ಪಾರ್ಚನೆಯಂತೆ ಭಾಸವಾಗ್ತಿದೆ ಇಟ್ಟಿಗೆ-ಸಿಗೋಡು ಗ್ರಾಮದ ವಿನಾಯಕ ಕೆರೆ. ಗ್ರಾಮದ ಈ ಕೆರೆಯ ಅಂಗಳದ ಮರಗಳಲ್ಲಿ ವಾಸಿಸ್ತಿರೋ ಬೆಳ್ಳಕ್ಕಿಗಳ ಹಿಂಡು ನೋಡುಗನಿಗೆ ಹೊಸದೊಂದು ಲೋಕವನ್ನೇ ಸೃಷ್ಠಿಸ್ತಿದೆ. ಸುತ್ತಮುತ್ತಲಿನ ಹೊಲ-ಗದ್ದೆ, ಹಳ್ಳ-ಕೊಳ್ಳದಲ್ಲಿನ ಜಲಚರಗಳನ್ನ ತಿಂದು ವಿನಾಯಕ ಕೆರೆಯ ಅಂಗಳದಲ್ಲಿ ಸ್ವಚ್ಛಂದವಾಗಿ ಹಾರಾಡ್ತಾ ಆಶ್ರಯ ಪಡೆದಿವೆ.

ಬೆಳಗಿನ ಜಾವ ಹಾಗೂ ಸಂಜೆ ಸೂರ್ಯ ಮುಳುಗೋ ವೇಳೆ ಈ ಕೆರೆಯ ಸೌಂದರ್ಯವೇ ಬದಲಾಗಿರುತ್ತೆ. ಒಣಗಿ ನಿಂತ ಮರಗಳಿಗೆ ಮಲ್ಲಿಗೆ ಹಾರ ಹಾಕಿದಂತೆ ನೋಡುಗರ ಕಣ್ಣಿಗೆ ಭಾಸವಾಗ್ತಿದೆ. ಹಕ್ಕಿಗಳ ದನಿಗೆ ಗಾಳಿಯೂ ಧ್ವನಿಗೂಡಿಸಿ ಹೊಸದೊಂದು ಸಂಗೀತಕ್ಕೆ ನಾಂದಿ ಹಾಡ್ತಿದೆ ವಿನಾಯಕ ಕೆರೆ. ಸಂಜೆಯಾಗ್ತಿದ್ದಂತೆ ಸೂರ್ಯ ಕ್ರಮೇಣ ಕಣ್ಮರೆಯಾಗ್ತಿದ್ದಂತೆ ಒಂದೊಂದೆ ಕಾಣಸಿಗೋ ಬೆಳ್ಳಕ್ಕಿಗಳೂ ನೋಡ-ನೋಡ್ತಿದ್ದಂತೆ ಹತ್ತು, ನೂರು, ಸಾವಿರ ಆಗುತ್ತೆ. ಎಲ್ಲವನ್ನೂ ಒಟ್ಟಿಗೆ ನೋಡೋ ಖುಷಿಯೇ ಬೇರೆ. ಕತ್ತಲಾಗ್ತಿದ್ದಂತೆ ಮತ್ತೆ ಒಂದೊಂದೆ ನಾಪತ್ತೆಯಾಗ್ತಾ ಗೂಡು ಸೇರಿಕೊಳ್ತಾವೆ.

ಪ್ರತಿ ವರ್ಷ ಡಿಸೆಂಬರ್ ಜನವರಿಯಲ್ಲಿ ಬರುತ್ತಿದ್ದ ಬೆಳ್ಳಕ್ಕಿಗಳು ಈ ಬಾರಿ ನವೆಂಬರ್ನಲ್ಲೇ ರಾರಾಜಿಸ್ತಿವೆ. ಈ ಭಾಗದಲ್ಲಿ ಈಗ ಬೆಳೆಗಳ ಕಟಾವು ನಡೆಯುತ್ತಿರೋದ್ರಿಂದ ಬೆಳ್ಳಕ್ಕಿಗಳು ವಂಶಾಭಿವೃದ್ಧಿ ಬಳಿಕ ಮತ್ತೆ ತಮ್ಮ ಊರು ಸೇರಿಕೊಳ್ಳುತ್ತಿವೆ. ಈ ಕ್ರಿಯೆಗೆ ಎಂಟತ್ತು ವರ್ಷಗಳ ಇತಿಹಾಸವಿದೆ. ಆದರೆ, ಒಂದೇ ಕಡೆ ಹೀಗೆ ಸಾವಿರಾರು ಬೆಳ್ಳಕ್ಕಿಗಳನ್ನ ಒಟ್ಟಿಗೆ ನೋಡೋ ಜನ ದಿನದ ಎಲ್ಲಾ ಜಂಜಾಟಗಳನ್ನ ಮರೆತು ಮನಸ್ಸನ್ನ ಹಗುರ ಮಾಡಿಕೊಳ್ಳುತ್ತಿದ್ದಾರೆ. ಈ ಕೆರೆ ದೂರದೂರಿನವರಿಗಲ್ಲ, ಸ್ಥಳಿಯರಿಗೆ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.