ಬಣಕಲ್: ಮಲಿನವಾಗುತ್ತಿದೆ ಹೇಮಾವತಿ ಒಡಲು-ನದಿ ಸೇರುತ್ತಿದೆ ಪೆಟ್ರೋಲಿಯಂ ಉತ್ಪನ್ನ…

381
firstsuddi

ಮೂಡಿಗೆರೆ : ತಾಲ್ಲೂಕಿನ ಕುಡಿಯುವ ನೀರಿನ ಮೂಲದ ಹೇಮಾವತಿ ನದಿಗೆ ಬಣಕಲ್ ಸಮೀಪ ವಾಹನಗಳನ್ನು ಇಳಿಸಿ ತೊಳೆಯಲಾಗುತ್ತಿದ್ದು ಹೇಮಾವತಿಯ ಒಡಲು ಮಲಿನವಾಗುತ್ತಿದೆ.
ಬಣಕಲ್ ಪಶು ಚಿಕಿತ್ಸಾಲಯದ ಪಕ್ಕ ಸೇತುವೆ ಬಳಿ ವಾಹನಗಳನ್ನು ತೊಳೆಯಲಾಗುತ್ತಿದೆ. ಇದರಿಂದ ವಾಹನಗಳಲ್ಲಿ ಇರುವ ಪೆಟ್ರೋಲಿಯಂ ಉತ್ಪನ್ನಗಳು ನೀರು ಸೇರುತ್ತಿದೆ. ತಾಲ್ಲೂಕಿಗೆ ಹೇಮಾವತಿ ಕುಡಿಯುವ ನೀರಿನ ಮೂಲವಾಗಿದ್ದು, ನದಿ ಮಲಿನಗೊಂಡರೆ ಆ ನೀರನ್ನು ಕುಡಿಯುವವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ನೀರು ಕಲುಷಿತಗೊಂಡ ಪರಿಣಾಮ ಮಲೆನಾಡಿನಲ್ಲಿ ಮಾತ್ರಕಾಣಸಿಗುವ ಅಪರೂಪದ ಜಲಚರಗಳ ಜೀವಕ್ಕೆ ಸಂಚಾಕಾರ ಎದುರಾಗಿದೆ. ಅಲ್ಲದೇ ಮಲೆನಾಡಿನ ನದಿತೀರಗಳಿಗೆ ಕೆಲಕಾಲದವರೆಗೆ ವಲಸೆ ಬಂದು ಕುರುಚಲು ಪೊದೆಗಳಲ್ಲಿ ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡಿಕೊಳ್ಳುತ್ತಿದ್ದ ಹಕ್ಕಿಗಳ ಸಂಖ್ಯೆ ಕೂಡ ಕಡಿಮೆಯಾಗಿದೆ. ನದಿ ಮಲಿನಗೊಳಿಸದಂತೆ ಬಣಕಲ್ ಗ್ರಾ.ಪಂ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಅಧಿಕಾರಿಗಳು ಕೂಡಲೇ ಕಟ್ಟುನಿಟ್ಟಿನ ಕ್ರಮಕೈಗೊಳುವ ಅಗತ್ಯವಿದೆ.