ಮೂಡಿಗೆರೆ ಕಾಂಗ್ರೆಸ್ ಕಛೇರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ಭೇಟಿ…

477
firstsuddi

ಮೂಡಿಗೆರೆ : ಇಂದು ಕಾಂಗ್ರಸ್ ಕಛೇರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ಅವರು ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಜನತೆಗೆ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಹೇಳಲು ಸರಿಯಾದ ಅವಕಾಶ ಸಿಗಲಿಲ್ಲ. ಈ ವಿಚಾರದಲ್ಲಿ ನಾವು ತೀರಾ ಹಿಂದುಳಿದಿದ್ದು ಬಿಜೆಪಿಯವರಿಗೆ ಇದು ಲಾಭವಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ನಡೆದ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕಿತ್ತು. ಆದರೆ ಈಗಲೂ ಕಾಲ ಮಿಂಚಿಲ್ಲ. ಕೊನೆಯ ಹಂತದ ಪ್ರತೀ ಪ್ರಜೆಗೂ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ತಿಳಿಸಿ ಹೇಳುವ ಕೆಲಸವನ್ನು ಎಲ್ಲರೂ ಒಟ್ಟಾಗಿ ಮಾಡೋಣ ಎಂದರು.
ಮಾತು ಮುಂದುವರೆಸಿದ ಅವರು ಬಿಜೆಪಿಯ ಸ್ಥಳೀಯ ಶಾಸಕರಾದ ಎಂ.ಪಿ.ಕುಮಾರಸ್ವಾಮಿ ಅವರು ನೆರೆ ಪರಿಹಾರ ಕಾರ್ಯದಲ್ಲಿ ಮಲೆನಾಡು ಜನರಿಗೆ ಮೋಸ ಆಗಿದೆ. ನೆರೆ ಪರಿಹಾರ ಕಾರ್ಯದಲ್ಲಿ ಸರಿಯಾದ ಕೆಲಸ ಆಗಿಲ್ಲ. ಕೇಂದ್ರ ಸರಕಾರ ಉತ್ತಮ ಸಹಕಾರ ನೀಡಿಲ್ಲ ಎಂದು ಸ್ವತಃ ತಾವೇ ಒಪ್ಪಿಕೊಂಡಿದ್ದಾರೆ. ಜನರ ಬಳಿ ಇಂಥಹ ಸೂಕ್ಷ್ಮ ವಿಚಾರಗಳನ್ನು ತೆರೆದಿಡುವ ಜೊತೆಗೆ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನತೆಗೆ ತಲುಪಿಸುವ ಕೆಲಸ ಆಗಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವೆ ಡಾ.ಮೋಟಮ್ಮ ಅವರು ಮಾತನಾಡಿ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಪರ್ಧಿಗಳು ಸೋತಿರುವುದಕ್ಕೆ ಕಾರ್ಯಕರ್ತರು ಧೃತಿಗೆಡಬೇಕಿಲ್ಲ. ಎಲ್ಲಾ ರಂಗಗಳಲ್ಲೂ ಸೋಲು ಗೆಲುವು ಸಹಜ. ಆದರೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಪಕ್ಷ ಸಂಘಟನೆಗೆ ಮುಂದಾಗೋಣ. ಬೂತ್ ಮಟ್ಟದಲ್ಲಿ ಕಾರ್ಯಕರ್ತರುಗಳನ್ನು ಒಟ್ಟುಗೂಡಿಸಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನರಿಗೆ ತಲುಪಿಸೋಣ ಎಂದರು.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಜಿ. ಸುರೇಂದ್ರ ಅವರು ಮಾತನಾಡಿ, ಬಿಜೆಪಿ ಸರ್ಕಾರದ ಆಡಳಿತದಿಂದ ಜನಸಾಮಾನ್ಯ ಜೀವನ ನಡೆಸಲು ಕಷ್ಟವಾಗುತ್ತಿದೆ. ಈ ಬಾರಿಯ ಅತೀವೃಷ್ಟಿಯಿಂದಾಗಿ ಮಲೆನಾಡಿನ ಜನರು ತತ್ತರಿಸಿ ಹೋಗಿದ್ದಾರೆ. ಕಾಫಿ ತೋಟಗಳ ನಂಬಿ ಜೀವನ ಸಾಗಿಸುತ್ತಿದ್ದ ರೈತ ಕಂಗಾಲಾಗಿದ್ದಾನೆ. ರೈತನ ಪಾಲಿಗೆ ಬಿಜೆಪಿ ಪಕ್ಷ ಇದ್ದೂ ಇಲ್ಲದಂತಾಗಿದೆ. ಪ್ರಸ್ತುತ ಕಾಂಗ್ರೆಸ್ ಪಕ್ಷಕ್ಕೆ ಸೋಲು ಉಂಟಾಗಿರುವುದು ಸತ್ಯ. ಆದರೆ ಅದು ಶಾಶ್ವತ ಅಲ್ಲ. ಒಳ್ಳೆಯ ದಿನಗಳು ಖಂಡಿತವಾಗಿಯೂ ಬರುತ್ತವೆ. ಎಲ್ಲರೂ ನಮ್ಮೊಂದಿಗೆ ಕೈ ಜೋಡಿಸಿ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸುವ ಕಾರ್ಯದಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಯೂತ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಅಭಿಜಿತ್ ಮಾತನಾಡಿ ನಾವು ಸ್ಥಳೀಯರಾಗಿ ಮೊದಲು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಯುವಜನತೆಗೆ ಕಾಂಗ್ರೆಸ್ ಪಕ್ಷದ ಸಾಧನೆಗಳ ಬಗ್ಗೆ ತಿಳಿಸಿಕೊಡಬೇಕು. ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಡಿ.ಎಲ್.ವಿಜಯಕುಮಾರ್, ಮಗ್ಗಲಮಕ್ಕಿ ಲಕ್ಷ್ಮಣ ಗೌಡ, ನಿಕಟಪೂರ್ವ ಅಧ್ಯಕ್ಷ ಹೇಮಶೇಖರ್, ತಾಲ್ಲೂಕು ವಕ್ತಾರ ಎಂ.ಎಸ್.ಅನಂತ್, ಪಟ್ಟಣ ಪಂ.ಸದಸ್ಯರಾದ ಹೊಸಕೆರೆ ರಮೇಶ್ ಹಾಗೂ ಹಂಜಾಃ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಬಿ.ಕೆ.ಜಯಮ್ಮ, ಮುಖಂಡರುಗಳಾದ ವಿನಯ್ ಕುಮಾರ್, ಹೂವಪ್ಪ, ಕೆ.ಆರ್.ಮಹೇಶ್, ಟಿ.ಎಂ.ಸುಬ್ರಹ್ಮಣ್ಯ, ಎಂ.ಸಿ.ಶಿವಾನಂದ ಸ್ವಾಮಿ ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯಧ್ಯಕ್ಷ ಬ್ರಿಜೇಶ್ ಕಡಿದಾಳ್ ಹಾಗೂ ಕಾರ್ಯಕರ್ತರುಗಳು ಹಾಜರಿದ್ದರು.