ಶ್ರೀನಗರ : ಭಾರಿ ಹಿಮಾಪಾತದ ನಡುವೆ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲು 100 ಮಂದಿ ಯೋಧರು ಸುಮಾರು 4ಗಂಟೆ ಹಿಮದಲ್ಲಿ ನಡೆದಿದ್ದು, ಸದ್ಯ ಯೋಧರು ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿನ್ನೆ ಜಮ್ಮು ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದ್ದ ಕಾರಣ ಗರ್ಭಿಣಿ ಶಮೀಮಾ ಎಂಬುವವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದೆ ಪರದಾಡುವಂತಾಗಿತ್ತು. ಶಮೀಮಾ ಅವರು ಆಸ್ಪತ್ರೆಗೆ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದ ವಿಷಯ ತಿಳಿದ 100 ಮಂದಿ ಯೋಧರು ಶಮೀಮಾ ಅವರನ್ನು ಸ್ಟ್ರೆಚರ್‍ನಲ್ಲಿ ಎತ್ತಿಕೊಂಡು ಸುಮಾರು 4ಗಂಟೆ ಹಿಮದಲ್ಲಿ ನಡೆದು ಆಸ್ಪತ್ರೆಗೆ ದಾಖಲಿಸಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಲ್ಲದೇ ಈ ವೀಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್ ಮೂಲಕ ಹಂಚಿಕೊಂಡಿದ್ದು, ತಾಯಿ ಹಾಗೂ ಮಗುವಿಗೆ ದೇವರು ಒಳ್ಳೆಯ ಆರೋಗ್ಯವನ್ನು ನೀಡಲಿ ಎಂದು ಆಶಿಸಿದ್ದಾರೆ.










