ಬೇಲೂರು : ಪೊಲೀಸರ ಮನದಾಳದಲ್ಲೂ ಭಾವನೆಗಳಿವೆ, ಅವರೂ ಮಾನವೀಯತೆ ಮೆರೆದು ಎಲ್ಲರೂ ಮೆಚ್ಚುವ ಕೆಲಸ ಮಾಡುತ್ತಾರೆ…

680
firstsuddi

ಬೇಲೂರು(ಜಯಮಿತ್ರ) : ಪೊಲೀಸರೆಂದರೆ ಘಟನೆಗಳಿಗೆ ಸಂಬಂಧಿಸಿದಂತೆ ಬಂದಂತಹ ದೂರು ಪಡೆದು ದಾಖಲಿಸುವುದು, ಪ್ರಕರಣಗಳಲ್ಲಿ ವ್ಯಕ್ತಿಗಳನ್ನು ಬಂಧಿಸಿ ತನಿಖೆ ನಡೆಸುವುದು, ಅನಿವಾರ್ಯ ಎಂದಾದರೆ ಬಾಯಿ ಬಿಡಿಸಲು ಹೆಚ್ಚಿನ ಪಂಚಿಂಗ್ ನಡೆಸುವುದು ಇವಿಷ್ಟೆ ಎಂಬುವುದೇ ಸಾರ್ವಜನಿಕರ ಭಾವನೆ.
ಪೊಲೀಸರಿಗೂ ಮಾನವೀಯತೆ ಇದೆ. ಅವರೂ ಕಷ್ಟವನ್ನು ಮನಗಂಡಿದ್ದಾರೆ ಎನ್ನುವುದಕ್ಕೆ ತಾಲೂಕಿನ ಅರೇಹಳ್ಳಿಯ ಆರಕ್ಷಕ ಉಪನಿರೀಕ್ಷಕ ಬಾಲು ಅವರು ಸಾಕ್ಷಿಯಾಗಿದ್ದಾರೆ.
ಕಳೆದ ನವೆಂಬರ್ 14 ರಂದು ರಾತ್ರಿ 8 ಗಂಟೆಯಲ್ಲಿ ನಡೆದ ದರೋಡೆ ಪ್ರಕರಣವೊಂದರಲ್ಲಿ ಗಾಯಗೊಂಡ ಅಸ್ಸಾಂ ರಾಜ್ಯದ ಕೂಲಿಕಾರ್ಮಿಕನೋರ್ವನಿಗೆ ಅಗತ್ಯವಿದ್ದ ತುರ್ತು ಚಿಕಿತ್ಸೆಯನ್ನು ನೀಡಿ, ಬೇಲೂರಿನಿಂದ ಬೆಂಗಳೂರಿನವರಗೆ ಕರೆದೊಯ್ದು ತಮ್ಮದೆ ಖರ್ಚಿನಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಿ ಆತನ ಪ್ರಾಣ ಉಳಿಸಿದ ಪ್ರಾಣರಕ್ಷಕ ಆಗಿದ್ದಾರೆ ಇಲ್ಲಿನ ಪಿಎಸ್‍ಐ ಬಾಲು ಅವರು.
ಏನಿದು ಪ್ರಕರಣ: ನವೆಂಬರ್ 14 ರಂದು ರಾತ್ರಿ ಚೀಕನಹಳ್ಳಿಯಲ್ಲಿ ನಡೆದುಕೊಂಡು ಕಾಫಿ ತೋಟದಲ್ಲಿದ್ದ ತನ್ನ ಮನೆಗೆ ಹೋಗುತ್ತಿದ್ದ ಅಸ್ಸಾಂ ರಾಜ್ಯದ ಕೂಲಿ ಕಾರ್ಮಿಕ ಅಕ್ಬರ್ ಆಲಿ ಎಂಬುವನನ್ನು ಕಾರಿನಲ್ಲಿ ಬಂದು ಅಡ್ಡಗಟ್ಟಿದ ದರೋಡೆಕೋರರ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿ ಆತನಿಂದ ಮೊಬೈಲ್ ಇನ್ನಿತರ ವಸ್ತುಗಳನ್ನು ದೋಚಿತ್ತು. ಈ ವೇಳೆ ಅಕ್ಬರ್ ಆಲಿಯ ಕೈಗೆ ಹೆಚ್ಚಿನ ಗಾಯಗಳಾಗಿ ನರ ತುಂಡಾಗಿ ರಕ್ತಸ್ರಾವವಾಗಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದನು.
ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಅರೇಹಳ್ಳಿ ಪಿಎಸ್‍ಐ ಬಾಲು ಹಾಗೂ ಸಿಬ್ಬಂದಿ ನರಳಾಡುತ್ತಿದ್ದ ಗಾಯಾಳುವನ್ನು ಅಂಬ್ಯೂಲೆನ್ಸ್ ಮೂಲಕ ಬೇಲೂರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು. ಆದರೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂಬ ವೈದ್ಯರ ಸಲಹೆಯಂತೆ ಹಾಸನ ಆಸ್ಪತ್ರೆಗೆ ಕರೆದುಕೊಂಡು ಹೋದ ಪಿಎಸ್‍ಐ ಬಾಲು ಹಾಗೂ ಸಿಬ್ಬಂದಿ ಅಲ್ಲಿಯೂ ಚಿಕಿತ್ಸೆ ಕೊಡಿಸಿದರು.
ಹಾಸನ ಆಸ್ಪತ್ರೆಯಲ್ಲಿಯೂ ವೈದ್ಯರು ಇನ್ನಷ್ಟು ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದ ಬೆಂಗಳೂರಿಗೆ ಕರೆದುಕೊಂಡು ಹೋಗುವುದು ಸೂಕ್ತ ಎಂಬ ಸಲಹೆ ನೀಡಿದರು.
ಕೂಡಲೇ ಖಾಸಗಿ ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿಗೆ ಸ್ವತಃ ಪಿಎಸ್‍ಐ ಬಾಲು ಅವರೇ ಕರೆದುಕೊಂಡು ಹೋಗಿ ಅಲ್ಲಿ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು.
ಅಲ್ಲಿ ಚಿಕಿತ್ಸೆ ಫಲಕಾರಿಯಾಗಿ ಇದೀಗ ಹಲ್ಲೆಗೊಳಗಾದ ವ್ಯಕ್ತಿಯು ಚೇತರಿಸಿಕೊಂಡು ಮನೆಗೆ ಬಂದಿದ್ದಾರೆ. ನಂತರ ಅಕ್ಬರ್ ಆಲಿಯನ್ನು ಆತನ ನಿವಾಸಕ್ಕೆ ತೆರಳಿ ಭೇಟಿ ಮಾಡಿದ ಪಿಎಸ್‍ಐ ಬಾಲು ಅವರು ಆತನ ಆರೋಗ್ಯ ವಿಚಾರಿಸಿದ್ದಾರೆ.  ಅಷ್ಟೆ ಅಲ್ಲದೆ ಆಸ್ಪತ್ರೆಯ ಎಲ್ಲಾ ವೆಚ್ಚಗಳನ್ನು ಪಿ.ಎಸ್.ಐ ಬಾಲು ಅವರೇ ಭರಿಸಿದ್ದಾರೆ ಎನ್ನುವುದು ತಿಳಿದುಬಂದಿರುವ ಮಾಹಿತಿ.
ಇದರ ಬಗ್ಗೆ ಖಚಿತಪಡಿಸಿಕೊಳ್ಳಲು ಅವರು ನಿರಾಕರಿಸಿದರು. ಆ ಸಂದರ್ಭದಲ್ಲಿ ಮನುಷ್ಯತ್ವದ ಪ್ರಶ್ನೆಯಾಗಿ ಆತನ ಪ್ರಾಣ ಉಳಿಸುವುದಷ್ಟೆ ನಮ್ಮ ಉದ್ದೇಶವಾಗಿತ್ತು ಅದಷ್ಟೇ ಮಾಡಿರುವುದಾಗಿ ಅವರು ಹೇಳಿದರು.
ಪೊಲೀಸರಿಗೂ ಮಾನವೀಯತೆಯಿದೆ. ಅವರೂ ಮನುಷ್ಯರೇ, ಆದರೆ ಅವರ ಶಿಸ್ತುಬದ್ಧ ಕರ್ತವ್ಯಕ್ಕೆ ರಾಜಕೀಯ, ರಾಜ ಕಾರಣದ ಹಿನ್ನಲೆಯಲ್ಲಿ ಅಡ್ಡಿಯುಂಟಾಗುವುದರಿಂದ ಕೆಲವೊಂದು ಘಟನೆಗಳಿಗೂ ಕಾರಣವಾಗುತ್ತದೆ.
ಪೊಲೀಸರನ್ನು ಹಾಡಿಹೊಗಳುವುದು ಕಡಿಮೆ. ಎಲ್ಲರೂ ಅವರನ್ನು ಮೆಚ್ಚುವುದೂ ವಿರಳ. ಈ ಎಲ್ಲಾ ಒತ್ತಡಗಳ ನಡುವೆಯೂ ಇಂತಹ ಮೌಲ್ಯಯುತ ನಡೆಯಿಂದ ಪೊಲೀಸರಲ್ಲಿ ಮಾನವೀಯ ಮೌಲ್ಯಗಳಿರುತ್ತದೆ ಹಾಗೂ ಅವರಿಗೂ ಅಣ್ಣ, ತಮ್ಮ, ಒಡ ಹುಟ್ಟಿದವರು, ಸಂಬಂಧಿಗಳು ಎಲ್ಲರೂ ಇದ್ದಾರೆ. ಅವರಿಗೂ ಬೇರೆಯವರಿಗೆ ಮಾದರಿಯಾಗುವಂತೆ ನಡೆದುಕೊಳ್ಳುವ ವ್ಯಕ್ತಿತ್ವ ಇರುತ್ತದೆ ಎಂಬುವುದು ಮತ್ತೊಮ್ಮೆ ಈ ಘಟನೆಯಿಂದ ಸಾಬೀತಾಗುತ್ತದೆ.
ಒಟ್ಟಾರೆ ಪಿ.ಎಸ್.ಐ ಬಾಲು ಅವರಂತಹವರ ನಡೆಗೆ ಸಾರ್ವಜನಿಕರಿಂದ ಒಂದು ದೊಡ್ಡ ಸೆಲ್ಯೂಟ್.