ಸಿಎಎ ವಿರೋಧಿಸಿ ಬೃಹತ್ ಸಮಾವೇಶ-ರಕ್ತದಲ್ಲಿ ಪತ್ರ ಬರೆದು ಪ್ರಧಾನಿ ಮೋದಿ ಅವರಿಗೆ ರವಾನೆ ಮಾಡಿದ ಯುವಕರು…

174
firstsuddi

ರಾಯಚೂರು : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಹಾಗೂ ರಾಷ್ಟ್ರೀಯ ಪೌರತ್ವ ನೊಂದಾಣಿಯನ್ನು ವಿರೋಧಿಸಿ ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಯುವಕರು ರಕ್ತದಲ್ಲಿ ಪತ್ರ ಬರೆದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ರವಾನೆ ಮಾಡಲಾಗಿದೆ. ಬೃಹತ್ ಸಮಾವೇಶಕ್ಕೆ ಜಿಲ್ಲೆಯ ವಿವಿದೆಡೆಯಿಂದ ಆಗಮಿಸಿದ ಯುವಕರು ರಕ್ತದಲ್ಲಿ ಪತ್ರವನ್ನು ಬರೆದಿದ್ದಾರೆ. ಈ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು, ಸೇವೆ ಮಾಡುತ್ತೇವೆ ಎಂದು ತಲೆ ಸವರಿದರೆ ನೀವು ನಂಬಿಕೆಗೆ ಯೋಗ್ಯವಾದ ಜನ ಅಲ್ಲ. ಬಿಜೆಪಿ ಅಂದ್ರೆ ಬೇಡ ಅನ್ನಲ್ಲ. ಬಿಜೆಪಿಯನ್ನು ನಡೆಸುವ ಆಂತರಿಕ ಸಂಘಟನೆಗಳನ್ನು ನಾವು ಒಪ್ಪುವುದಿಲ್ಲ. ಬಸವಣ್ಣನನ್ನು ಕೊಂದವರು, ಗಾಂಧಿಯನ್ನು ಕೊಂದವರು, ಬುದ್ಧನನ್ನು ಕೊಂದವರು ನಮ್ಮನ್ನು ಉಳಿಸುತ್ತಾರ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಡಿಯೂರಪ್ಪ ಅವರಿಗೆ ಸ್ವತಂತ್ರವಾಗಿ ಸರ್ಕಾರ ನಡೆಸಲು ಆಗುತ್ತಿಲ್ಲ. ಯಡಿಯೂರಪ್ಪ ಹಾಗೂ ಸಚಿವರಿಗೆ ಸ್ವತಂತ್ರ ಕೊಟ್ಟಿದ್ದೀರಾ? ಯಡಿಯೂರಪ್ಪ ಅವರಿಗೆ  ಸರ್ಕಾರ ನಡೆಸುವುದಕ್ಕೆ ಸ್ವಾಂತಂತ್ರ್ಯ ಇಲ್ಲ ಎಂದು ಕಿಡಿಕಾರಿದರು.