ಪೌರತ್ವ ತಿದ್ದುಪಡಿ ಕಾಯ್ದೆ : ಸಂವಿಧಾನ ವಿರೋಧಿಯೇ…?

359
firstsuddi

ಡಾ. ಎಂ.ಎಸ್. ಮಣಿ
ಭಾಗ-2
ಇದೆಲ್ಲವೂ ಸರಿ, ಆದರೆ, ಪೌರತ್ವ ತಿದ್ದುಪಡಿ ಕಾಯ್ದೆ 2019ರಿಂದ ದೇಶದ ಭದ್ರತೆಗೂ ಅಪಾಯ ಬರಬಹುದು. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಿಂದ ಬಂದಿರುವ ಅಕ್ರಮ ವಲಸಿಗರಿಗೆ ಆಶ್ರಯ ಕೊಟ್ಟು ಪೌರತ್ವ ನೀಡುವಾಗ ಮುಸಲ್ಮಾನರನ್ನು ಕೈಬಿಡಲಾಗಿದೆ. ಇದರಿಂದ ನಮ್ಮ ದೇಶದಲ್ಲಿ ಆಶ್ರಯ ಪಡೆಯುವ ಹಿಂದೂ, ಕ್ರೈಸ್ತ, ಪಾರ್ಸಿ, ಜೈನ, ಬೌದ್ಧ, ಸಿಖ್ಖರನ್ನೊಳಗೊಂಡ ಆರು ಧರ್ಮಗಳ ಜನ ಅಲ್ಪಸಂಖ್ಯಾತರಾಗಿರುವ ದೇಶಗಳಲ್ಲಿ ಅನುಭವಿಸಬೇಕಾದ ಪರಿಸ್ಥಿತಿಯ ಅರಿವು ನಮ್ಮನ್ನಾಳುವವರಿಗೆ ಇದ್ದಂತಿಲ್ಲ. ಕಾಯ್ದೆ ಜಾರಿಗೆ ಬಂದ ಮೇಲೆ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಲ್ಲಿ `ಧಾರ್ಮಿಕ ಪೀಡನೆ’ ಇನ್ನೂ ಹೆಚ್ಚಾಗಬಹುದು. ಜೊತೆಗೆ ನೆರೆಯ ರಾಷ್ಟ್ರಗಳೊಂದಿಗೆ ನಮ್ಮ `ರಾಜತಾಂತ್ರಿಕ’ ಸಂಬಂಧವೂ ಹದಗೆಡಬಹುದು. ಪಾಕಿಸ್ತಾನ ಮತ್ತು ಶ್ರೀಲಂಕಾದೊಂದಿಗೆ ನಮ್ಮ ಸಂಬಂಧ ಸಾಕಷ್ಟು ಹಳಸಿಹೋಗಿದೆ. ಇಂತಹ ಸಮಯದಲ್ಲಿ ಪೌರಾತ್ವ ತಿದ್ದುಪಡಿ ಕಾಯ್ದೆ 2019ನ್ನು ಜಾರಿಗೆ ತಂದಿರುವುದರಿಂದ ರಾಜತಾಂತ್ರಿಕ ಸಂಬಂಧಗಳೊಂದಿಗೆ, `ವ್ಯಾಪಾರ’, `ಇಂಧನ’ ಮತ್ತು `ವೈದ್ಯಕೀಯ’, `ಪ್ರವಾಸೋದ್ಯಮ’ ಕೂಡ ಹಾಳಾಗಲಿದೆ. ಕ್ರಿಸ್ಮಸ್ ಹಾಗೂ ವರ್ಷಾಂತ್ಯ ಸಮಯದಲ್ಲಿ ವಿದೇಶಿ ಪ್ರವಾಸಿಗರು ನಮ್ಮ ದೇಶಕ್ಕೆ ಭೇಟಿ ನೀಡುವುದು ಕಡಿಮೆಯಾಗಿದೆ. ಅಸುರಕ್ಷಿತ ತಾಣ ಎಂದು ವಿದೇಶಿ ಪ್ರವಾಸಿಗಳು ಮಾತ್ರವಲ್ಲದೆ ದೇಶೀ ಪ್ರವಾಸಿಗರು ಕೂಡ ಪ್ರವಾಸ ತಾಣಗಳಿಗೆ ಭೇಟಿನೀಡಲು ಹಿಂಜರಿದಿದ್ದಾರೆ. ಇನ್ನೂ ಪಾಕಿಸ್ತಾನಿ ಗೂಢಾಚಾರಿ ಸಂಸ್ಥೆ ಐಎಸ್ಐ ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು ಕಾನೂನಾತ್ಮಕವಾಗಿಯೇ ದುರುಪಯೋಗಪಡಿಸಿಕೊಳ್ಳಬಹುದು. ಪೌರತ್ವ ತಿದ್ದುಪಡಿ ಕಾಯ್ದೆಯಡಿ ನಮ್ಮ ದೇಶಕ್ಕೆ ಬರುವ ಧರ್ಮೀಯರನ್ನೇ ತಮ್ಮ ಏಜೆಂಟರನ್ನಾಗಿ ನೇಮಕ ಮಾಡಿಕೊಂಡು ವಿಧ್ವಂಸಕ ಕೃತ್ಯ ಎಸಗಬಹುದು. ಈ ಬಗ್ಗೆ `ರಾ’ ಪಾರ್ಲಿಮೆಂಟಿನ ಜಂಟಿ ಸಂಸದೀಯ ಸಮಿತಿಯ ಮುಂದೆ ಹೇಳಿದೆ. ಇದೊಂದು ಕಳವಳಪಡುವ ವಿಷಯವಾಗಿದೆ. `ರಾ’ದಂತಹ ಬೇಹುಗಾರಿಕೆ ಸಂಸ್ಥೆಯ ಸಲಹೆಯಂತೆ, `ಧಾರ್ಮಿಕ ಪೀಡನೆ’ ಹೆಸರಲ್ಲಿ ನೆರೆಯ ರಾಷ್ಟ್ರಗಳು ಗೂಢಾಚಾರರನ್ನು ನಮ್ಮ ದೇಶದೊಳಗಡೆ ನೂಕಬಹುದು. ಇದರಿಂದ ಐಎಸ್ಐ ತನ್ನ ಗೂಢಾಚಾರ ಜಾಲವನ್ನು ವಿಸ್ತರಿಸಿಕೊಳ್ಳಬಹುದು.
ಹಾಗೆಯೇ ಈಗಿನ ಕಾಯ್ದೆಯು ಸುಳ್ಳು ಘೋಷಣೆ ಮಾಡಿ ನಮ್ಮ ದೇಶದ ಪೌರತ್ವ ಪಡೆಯಲು ಪ್ರೇರೇಪಿಸುವಂತಿದೆ. ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ)ಯಿಂದಾಗಿ ರಾಜ್ಯ ಬಿಟ್ಟ ಹಲವರಲ್ಲಿ ಬೆಂಗಾಳಿ ಹಿಂದೂಗಳು ಪ್ರಮುಖರಾಗಿದ್ದಾರೆ. ಅಸ್ಸಾಂನಲ್ಲಿ ಪೌರತ್ವ ಸಾಬೀತುಪಡಿಸಲು ವಿಫಲರಾಗುವವರೆಂದರೆ ಮುಸಲ್ಮಾನರು. ಇವರೆಲ್ಲರೂ ನೆರೆಯ ಬಾಂಗ್ಲಾದಿಂದ ಬಂದವರು. ತಮ್ಮ ತಾತನ ಕಾಲದಿಂದಲೂ ಈ ನೆಲದಲ್ಲಿಯೇ ಜೀವಿಸುತ್ತಿದ್ದಾರೆ. ಅಸ್ಸಾಂನ ಭೌಗೋಳಿಕ ಪರಿಸ್ಥಿತಿ ಮತ್ತು ಬಾಂಗ್ಲಾದೇಶದೊಂದಿಗೆ ಹೊಂದಿಕೊಂಡಿರುವ ಗಡಿಯನ್ನು ನಾವು ಮರೆಯುವಂತಿಲ್ಲ. ಇದು ಆರ್ಥಿಕ ವಲಸಿಗರು ಅಂದರೆ ವ್ಯಾಪಾರಸ್ಥರು ಸ್ವಾತಂತ್ರ್ಯಪೂರ್ವ ಮತ್ತು ನಂತರದಲ್ಲಿಯೂ ಬಂದು ಹೋಗುವ, ನೆಲೆಸುವ ಅವಕಾಶ ಮಾಡಿಕೊಟ್ಟಿದೆ. ಅಸ್ಸಾಂನಲ್ಲಿ ನೆಲೆಸಿರುವ ಬಹುತೇಕ ವಲಸಿಗರು ಬೆಂಗಾಳಿ ಹಿಂದೂಗಳಾಗಿಯೇ ಇರುವರು. ರಾಷ್ಟ್ರೀಯ ಪೌರತ್ವ ನೋಂದಣಿಗೆ ಒಳಪಡುವವರಲ್ಲಿ ಕೆಲವರು ಭಾರತೀಯರೇ ಆಗಿದ್ದಾರೆ. ಆದರೆ, ಇವರ್ಯಾರು ದಾಖಲೆಗನ್ನು ಮಾಡಿಸಿಕೊಂಡೇ ಇಲ್ಲ. ರಾಷ್ಟ್ರೀಯ ಪೌರತ್ವ ನೋಂದಣಿಗೆ ಒಳಪಡದ ಹೆಚ್ಚಿನ ಸಂಖ್ಯೆಯ ವಲಸಿಗರಿಗೆ ಪೌರತ್ವ ನೀಡುವ ಮೊದಲು ಅವರಿಂದ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಿಂದ ಬಂದಿರುವ ಧಾರ್ಮಿಕ ಅಲ್ಪಸಂಖ್ಯಾತ ತಾನೆಂದು ಮತ್ತು ತಾನು ಧಾರ್ಮಿಕ ಹಿಂಸೆಗೆ ಗುರಿಯಾದವನೆಂಬ ಘೋಷಣಾ ಪತ್ರವನ್ನು ಪಡೆಯಬೇಕು. ಜೊತೆಗೆ ಸಾಬೀತುಪಡಿಸಲೂ ಬೇಕು. ತಿದ್ದುಪಡಿ ಕಾಯ್ದೆ ಜಾರಿಗೆ ಬರುವವರೆಗೂ ದೇಶದೊಳಗೆ ಇದ್ದವರೆಲ್ಲರೂ ಭಾರತೀಯರಾಗಿದ್ದರು. ಜಾರಿಗೆ ಬಂದಿರುವುದರಿಂದ ದಾಖಲೆ ರಹಿತರೆಲ್ಲರೂ ವಿದೇಶಿಯರಾಗಿದ್ದಾರೆ. ರಾಷ್ಟ್ರೀಯ ಪೌರತ್ವ ನೋಂದಣಿಗೆ ತಮ್ಮ ಹೆಸರು ಸೇರಿಸಿಕೊಂಡು, ಭಾರತೀಯ ಪೌರತ್ವ ಪಡೆಯುವ ಮೊದಲಿಗೆ ದಾಖಲೆರಹಿತರು, ವಿದೇಶಿಯರೆಂದು ಘೋಷಿಸಿಕೊಳ್ಳಬೇಕು. ಆಗ ಇವರು ಸುಳ್ಳು ಪ್ರಮಾಣ ಪತ್ರಗಳನ್ನು, ದಾಖಲೆಗಳನ್ನು ಒದಗಿಸಬಹುದು. ಇದೊಂದು ವಿಲಕ್ಷಣ ವಿಚಾರವಾಗಿದೆ. `ಗಡೀಪಾರಾಗುವ ಆತಂಕ’, `ಪೌರತ್ವ ಹಕ್ಕಿನ ವಿಚಾರಣೆ’, `ಕಿರುಕುಳ’, `ಪರಕೀಯತೆ’, `ಪ್ರತ್ಯೇಕತವಾದ’ ಮತ್ತು `ಅಮೂಲಾಗ್ರೀಕರಣ’, `ಈಶಾನ್ಯ ರಾಜ್ಯಗಳ ವೈಚಾರೀಕರಣ’ ಸಮಸ್ಯೆಗೆ ದಾರಿ ಮಾಡಿಕೊಲಿದೆ. ತಿದ್ದುಪಡಿ ಕಾಯ್ದೆ ದೇಶದ `ಜಾತ್ಯಾತೀತ ಗುರುತಿಗೆ’ ಅಪಾಯ ತಂದೊಡ್ಡಿದೆ. ಅಲ್ಲದೆ, ಸಂವಿಧಾನದ ತತ್ವಗಳಾದ `ಬಹುತ್ವ’, `ವೈವಿಧ್ಯತೆ’, `ಅಲ್ಪಸಂಖ್ಯಾತರ ಹಕ್ಕು’ ಮತ್ತು `ಧರ್ಮದ ಸ್ವಾತಂತ್ರ್ಯ’ ಪ್ರಮುಖ ತತ್ವಗಳಾಗಿವೆ. ಇವೆಲ್ಲವೂ ಕೂಡ ಅಪಾಯದ ಹೊಸ್ತಿಲಲ್ಲಿ ನಿಲ್ಲಿಸಿವೆ.
ಇಷ್ಟಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆ 2019ರ ಗುರಿ ನಮ್ಮ ದೇಶದಲ್ಲಿ ನೆಲೆಸಿರುವ 200 ಮಿಲಿಯನ್ ಮುಸಲ್ಮಾನರನ್ನು ಶಿಕ್ಷಿಸುವುದಲ್ಲ. ಇವರುಗಳಿಗೆ ಸಂವಿಧಾನದ ಎಲ್ಲಾ ಹಕ್ಕುಗಳು ಇರುತ್ತವೆ. ಇವರ ಗುರಿ ದೇಶದಲ್ಲಿರುವ 1 ಬಿಲಿಯನ್ ಹಿಂದೂಗಳು ಮಾತ್ರ. ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು 2024ರ ಲೋಕಸಭಾ ಚುನಾವಣೆಗೆ ಬಳಸಿಕೊಳ್ಳುವ ಇರಾದೆ ಭಾಜಪಗೆ ಇದೆ. `ರಾಮಮಂದಿರ’, `ತ್ರಿವಳಿ ತಲಾಕ್’, `ಅನುಚ್ಛೇದ 370′, ಎಲ್ಲವೂ ಭಾಜಪ ಬಯಸಿದಂತೆ ಸಾಗಿ ಚುನಾವಣೆಗೆ ಲಾಭ ತಂದುಕೊಟ್ಟಿವೆ. 2024ರ ಲೋಕಸಭಾ ಚುನಾವಣೆಗೆ ಭಾಜಪ ಈಗಾಗಲೇ ತಯಾರಿ ನಡೆಸಿದೆ. ಇದಕ್ಕೂ ಪೂರ್ವದಲ್ಲಿ ಸುಮಾರು 12 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಇತ್ತೀಚೆಗೆ ತಾನೇ ಮಹಾರಾಷ್ಟ್ರ, ಜಾರ್ಖಂಡ್ನಲ್ಲಿ ಅಧಿಕಾರ ಕಳೆದುಕೊಂಡಿದೆ. ಇದಕ್ಕಾಗಿ ತನ್ನದೇ ಆದ ಶೇಕಡ 40ರ ಮತಬ್ಯಾಂಕ್ನ್ನು ಗಟ್ಟಿಗೊಳಿಸಿಕೊಳ್ಳಬೇಕಿದೆ.
ಇದೀಗ ಭಾಜಪದ ಮಿತ್ರಪಕ್ಷಗಳು ನಿಧಾನವಾಗಿ ಹಿಂದೆ ಸರಿಯುವಂತೆ ಕಾಣುತ್ತಿದೆ. ಪೌರತ್ವ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿದ್ದ ಜೆಡಿಯುನ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿ ಮಾಡುವ ಉದ್ದೇಶವಿಲ್ಲ ಎಂದಿದ್ದಾರೆ. ಆಂಧ್ರದ ಮುಖ್ಯಮಂತ್ರಿ ಜಗನ್ ಕೂಡ ಹೇಳಿದ್ದರು. ಜಾರ್ಖಂಡ್ ಸೋಲಿನ ನಂತರ ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್ಜಿಪಿ ಕೂಡ ಕಂಗೆಟ್ಟು ಕೂತಿದೆ. ಅಕಾಲಿದಳ ಕೂಡ ಭಾಜಪದ `ಕುದುರೆ ಸವಾರಿ’ ನಿಲುವಿನಿಂದ ಅತೃಪ್ತಿಯನ್ನು ಹೊಂದಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿರುವುದರಿಂದ ದೇಶದಲ್ಲಿರುವ ಶೇಕಡ 20ರಷ್ಟಿರುವ ಹಿಂದೂ ಹೊರತು ಪಡಿಸಿದವರ ಮತಗಳನ್ನು ಭಾಜಪ ಉಪೇಕ್ಷಿಸಬಹುದು. ಒಂದು ವೇಳೆ ಮುಸಲ್ಮಾನರು ಒಗ್ಗಟ್ಟಿನಿಂದ ಮತ್ತು ಉಗ್ರವಾಗಿ ಭಾಜಪ ವಿರುದ್ಧ ಮತ ಚಲಾಯಿಸಿದರೂ, ಭಾಜಪಗೇನೂ ಹೊಡೆತ ಬೀಳುವುದಿಲ್ಲ. ಇದಕ್ಕಾಗಿಯೇ ಶೇಕಡ 80ರಷ್ಟಿರುವ ಹಿಂದೂ ಮತಗಳನ್ನು ಭಾಜಪ ಸೆಳೆಯಬೇಕು. ಅಲ್ಲದೆ 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಆರಿಸಿ ಬರಲು `ಹಿಂದೂ ಮತಬ್ಯಾಂಕ್’ ಧ್ರುವೀಕರಣಗೊಳಿಸಿಕೊಳ್ಳಬೇಕಿದೆ.
2019 ಲೋಕಸಭಾ ಚುನಾವಣೆಯಲ್ಲಿ ಇದು ಶೇಕಡ 37ರಷ್ಟು ಮತಗಳನ್ನು ಗಳಿಸಿತ್ತು. ಆದರೆ ಆರ್ಥಿಕ ಸಂಕಷ್ಟ ಅದರಲ್ಲೂ ಗ್ರಾಮೀಣ ಭಾರತದಲ್ಲಿ ಭಾದಿಸಿದ್ದರಿಂದ ಭಾಜಪದ ಕಾಮನಬಿಲ್ಲಿನ ಒಕ್ಕೂಟ ಬ್ರಾಹ್ಮಣ, ಠಾಕೂರ್, ಹಿಂದುಳಿದವರು, ಆರ್ಥಿಕವಾಗಿ ಹಿಂದುಳಿದವರ ಕೂಟ ಒಂದಾಗಲು ತ್ರಾಸವಾಗಿದೆ.
ಸಹಜವಾಗಿ ಏಳುವ ಭಿನ್ನಾಭಿಪ್ರಾಯ ಭಾಜಪವನ್ನು ಕಠಿಣ ಪರಿಸ್ಥಿತಿಗೆ ನೂಕಿದೆ. ಇದನ್ನು ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲೂ ಕಾಣಬಹುದು. 2019ರ ಲೋಕಸಭಾ ಚುನಾವಣೆಯಲ್ಲಿ ಭಾಜಪಗೆ ಶೇಕಡ 80ರಷ್ಟಿದ್ದ ಹಿಂದೂ ಮತಗಳಲ್ಲಿ ಅರ್ಧದಷ್ಟನ್ನು ಗಳಿಸಲು ಸಾಧ್ಯವಾಗಿದ್ದು `ರಾಷ್ಟ್ರೀಯತೆ’ ಎಂಬ ಸ್ನಾಯು ಬಲದಿಂದ ಮಾತ್ರವಾಗಿದೆ. ಆದರೆ, ಇದಾದ ನಂತರ ನಡೆದ ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್ ವಿಧಾನಸಭಾ ಚುನಾವಣೆಗಳು ನಿತ್ಯ ಧ್ರುವೀಕರಣ ಎಲ್ಲಾ ಕಾಲಕ್ಕೂ ಕೈಹಿಡಿಯುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ.
ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ, ಹಿಂದೂ ಮತಬ್ಯಾಂಕ್ ಧ್ರುವೀಕರಣಗೊಳಿಸಲು ಇರುವ ಚಿಕಿತ್ಸೆಯಾಗಿದೆ. ಅನುಚ್ಛೇದ 370 ಮತ್ತು ಅಯೋಧ್ಯೆಯ ಗೆಲುವು ಹಿಂದೂ ಮತದಾರರಲ್ಲಿ ಸಮಾಧಾನ ಮೂಡಿಸಿದೆ. ಇನ್ನೂ ಅವರನ್ನು ಪುಟಿದೆಬ್ಬಿಸಿ 2024ರ ಚುನಾವಣೆಯವರೆಗೂ ಹಿಡಿದಿಟ್ಟುಕೊಳ್ಳಲು ಹೂಡಿರುವ ಅಸ್ತ್ರ ಪೌರತ್ವ ತಿದ್ದುಪಡಿ ಕಾಯ್ದೆ. ಹೀಗಾಗಿಯೇ ಇದನ್ನು 2024ರ ಚುನಾವಣೆಯ ವರೆಗೂ ಎಳೆದಾಡುತ್ತಲೇ ಇರುತ್ತದೆ. ಇದನ್ನರಿತೆ 2014 ಮತ್ತು 2019ರ ಚುನಾವಣಾ ಪ್ರಣಾಳಿಕೆಯಲ್ಲೂ ಭಾಜಪ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಆಯುಧವನ್ನಾಗಿ ಬಳಸಿಕೊಂಡಿತ್ತು.
ನನಗಿಲ್ಲಿ ನೆಹರು, ರಾಜಾಜಿ, ಇಂದಿರಾ ಗಾಂಧಿ ಅವರ ನೆನಪಾಗುತ್ತಿದೆ. ಇವರುಗಳೆಂದಿಗೂ `ನೈತಿಕ ಎಲ್ಲೆ’ ದಾಟಿರಲಿಲ್ಲ. ಹಿಂದೆ ನೆಹರು ಅವರು ಪ್ರಧಾನಿಯಾಗಿದ್ದಾಗ ಸಂಸತ್ತಿನ ಕಲಾಪ ನಡೆಯುತ್ತಿತ್ತು. ಆಗ ವಿರೋಧ ಪಕ್ಷದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ನೆಹರು ಆಡಳಿತ ನೀತಿಯನ್ನು ಕಟುವಾಗಿ ವಿಮರ್ಶಿಸುತ್ತಿದ್ದರು. ಇವರ ಧ್ವನಿಯನ್ನು ಹತ್ತಿಕ್ಕಲು ನೆಹರು ಕ್ಯಾಬಿನೆಟ್ನ ಪರಮಾಪ್ತರು ಜೋರುಧ್ವನಿಯಲ್ಲಿ ವಾಜಪೇಯಿ ಅವರ ಮಾತುಗಳಿಗೆ ಅಡ್ಡಿಪಡಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ನೆಹರು, ದೇಶದ ಭಾವಿ ಪ್ರಧಾನಿಯನ್ನು ಮಾತನಾಡಲು ಬಿಡಿ ಎಂದು ಸುಮ್ಮನಾಗಿಸುತ್ತಿದ್ದರು. ಆದರೆ, ಇದೀಗ ಇಂತಹ ಸೌಜನ್ಯವನ್ನು ಕಾಣಲು ಆಗುತ್ತಿಲ್ಲ. ಉದಾಹರಣೆಗೆ, ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಅವರು, ಒಂದು ವೇಳೆ ಹಿಂದೂಗಳು ಖಡ್ಗ ಹಿಡಿದು ದುರ್ಗಮ್ಮ ದೇವಿ ದರ್ಶನ ಪಡೆದುಕೊಂಡು ಬಂದರೆ ನಿಮಗೇ ಕಷ್ಟ ಆಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಸಾಲದಕ್ಕೆ ಕಾಂಗ್ರೆಸ್ನವರು ಬೇಕೂಫ್ಗಳು, ಇವರಿಗೆ ಸರಿಯಾಗಿ ರಾಷ್ಟ್ರಗೀತೆ ಹಾಡಲು ಬರಲ್ಲ, ಅವರ ಮಾತು ಕೇಳಿ ನೀವು ಬೀದಿಗಾ ಬರ್ತೀರಾ? ಹಿಂದೂಗಳು ಯಾರನ್ನೂ ದೇಶ ಬಿಟ್ಟು ಓಡಿಸುವುದಿಲ್ಲ. ನಿಮಗೇನಾದರೂ ಓಡಿ ಹೋಗಬೇಕು ಎನಿಸಿದರೆ ಹೋಗಿ, ನಿಮ್ಮನ್ನು ಯಾರೂ ತಡೆಯೋದಿಲ್ಲ. ಇಲ್ಲಿ ಸೇರಿರುವ ಕೇವಲ ಶೇಕಡ 5ರಷ್ಟು ಮಾತ್ರ, ಇನ್ನುಳಿದ ಶೇಕಡ 95 ಮಂದಿ ಹಿಂದೂಗಳು ಒಗ್ಗಟ್ಟಾಗಿ ಒಂದು ಉಫ್ ಎಂದರೆ ನೀವು ಹಾರಿ ಹೋಗ್ತೀರಾ ಎಂದಿದ್ದರು. ಇದೇ ರೀತಿ ಮೌಲಾನಾ ಪಿ.ಎಂ. ಮುಜಾಮ್ಮಿಲ್ ಸಾಹೇಬ್ ಅವರು, ಭಾರತದಲ್ಲಿ 30 ಕೋಟಿ ಮುಸ್ಲಿಮರು ಇದ್ದೇವೆ, ಪ್ರತಿಭಟನೆಗೆ ರಸ್ತೆಗಿಳಿಯುತ್ತಿರುವ ಮುಸ್ಲಿಮರ ಸಂಖ್ಯೆ ನೋಡಿ ಪ್ರಧಾನಿ ನರೇಂದ್ರ ಮೋದಿ ಗೊಂದಲಕ್ಕೆ ಒಳಗಾಗಿದ್ದಾರೆ, ಇವರೆಲ್ಲರೂ ಭಾರತೀಯರೇ. ಮುಸ್ಲಿಮರಿಗೆ 14-15 ಮಕ್ಕಳನ್ನು ಹುಟ್ಟಿಸುವ ತಾಕತ್ತು ಇದೆ. ತಾಕತ್ತಿದ್ದರೆ ನೀವೂ ಮಕ್ಕಳನ್ನು ಹುಟ್ಟಿಸಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇನ್ನೂ ಪಶ್ಚಿಮ ಬಂಗಾಳದ ಭಾಜಪ ಮುಖ್ಯಸ್ಥ ದಿಲೀಪ್ ಘೋಷ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ನಾಯಿಗಳಂತೆ ಹೊಡೆದುರುಳಿಸಲಾಗಿದೆ ಎಂದು ಭಾರಿ ವಿವಾದ ಸೃಷ್ಟಿಸಿದ್ದಾರೆ. ಇದು ಸರಿಯಲ್ಲ. ದೇಶದ ಜನ ಇವರುಗಳಿಗೆ ಮತ ಹಾಕಿ, ಜನಹಿತ ಕಾಯುವರೆಂದು ಇಟ್ಟ ನಂಬಿಕೆಗೆ ಎಳ್ಳುನೀರು ಬಿಟ್ಟಿದ್ದಾರೆ. ಇವರುಗಳ ಪ್ರಚೋದನೆಯ ಮಾತುಗಳಿಂದ ಸಿಕ್ಕ-ಸಿಕ್ಕವರು ಖಡ್ಗಹಿಡಿದರೆ ದೇಶದ ಗತಿ ಏನಾಗಬೇಕು. ಇವರಿಗೇಕೆ ನೆಹರು, ರಾಜಾಜಿ, ಅಣ್ಣಾದೊರೈ, ಡಾ|| ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಆದರ್ಶವಾಗುತ್ತಿಲ್ಲ. ಎಲ್ಲಿ ಹೋಯಿತು ಪ್ರಜಾಸತ್ತಾತ್ಮಕ ಉದಾತ್ತತೆ.
ನಮ್ಮ ದೇಶ ವಿಭಜನೆಯಾಗುವಾಗ ಅಂದಿನ ಮುಸಲ್ಮಾನರು ದೇಶವನ್ನೇಕೆ ಬಿಟ್ಟು ಹೋಗಲಿಲ್ಲ ಎಂಬುದನ್ನು ಚಿಂತಿಸಬೇಕಿದೆ. ಮುಸಲ್ಮಾನರಿಗೆ ಅವರದ್ದೇ ಧರ್ಮದ ದೇಶಕ್ಕಿಂತ ನಮ್ಮ ದೇಶದಲ್ಲಿಯೇ ಹೆಚ್ಚು ಸುರಕ್ಷಿತವಾಗಿ ಬಾಳಬಹುದೆಂದು ಮನಗಂಡಿದ್ದಾರೆ. ನಮ್ಮ ದೇಶದಲ್ಲಿ ಸಂವಿಧಾನ ಆಳುತ್ತಿದೆಯೇ ಹೊರತು ಯಾವುದೇ ಅನಾದಿಕಾಲದ ಧರ್ಮದ ಕಾನೂನಲ್ಲ. ಮುಸಲ್ಮಾನರೇ ನೀವು ನಮ್ಮ ಸುಫರ್ದಿಯಲ್ಲಿದ್ದರೆ ಮಾತ್ರ ಸುರಕ್ಷಿತ, ನಮಗೆ ಮತ ನೀಡಿ ಎನ್ನುವುದು ಕೂಡ ಹೇಯತನವಾಗುತ್ತದೆ.
1947ರಲ್ಲಿಯೇ ಮುಸಲ್ಮಾನರು ಇಸ್ಲಾಮಿಕ್ ರಾಷ್ಟ್ರ ಪಾಕಿಸ್ತಾನವನ್ನು ಧಿಕ್ಕರಿಸಿ, ನಮ್ಮೊಂದಿಗೆ ನೆಲೆನಿಂತರು. ಇದೀಗ ನಮ್ಮಲ್ಲಿರುವವರನ್ನೇ ನಾವುಗಳು ಬೆದರಿಸುವುದು, ಪಾಕಿಸ್ತಾನಕ್ಕೆ ಓಡಿಸುತ್ತೇವೆಂಬ ಹೇಳಿಕೆ ನೀಡುವುದು ಸರ್ವಥಾ ಸರಿಯಲ್ಲ. ನಮ್ಮಂತೆಯೇ ಇಲ್ಲಿನ ಮುಸಲ್ಮಾನರು ಕೂಡ ಭಾರತೀಯರೆ ಆಗಿದ್ದಾರೆ. ನಾವು ಧರ್ಮದ ಹೆಸರಿನಲ್ಲಿ ವಿಭಾಗ ಆಗುವ ಬದಲು `ಜಾತ್ಯಾತೀತ’, `ಸಮಾನತೆ’ಯ ತಳಹದಿಯ ಮೇಲೆ ದೇಶದ `ಅಭ್ಯುದಯ’ಕ್ಕಾಗಿ ಚಿಂತಿಸಬೇಕಿದೆ.
ಇದಿರಲಿ, ಇವತ್ತು ದೇಶದ ಆರ್ಥಿಕ ವ್ಯವಸ್ಥೆ ಚಂಚಲತೆಯತ್ತ, ಸಂದೇಹಾಸ್ಪದದಂತೆ, ತೊಡರಿನಿಂದ, ಅಸ್ಪಷ್ಟತೆಯತ್ತ ಸಾಗುತ್ತಿದೆ. 2016ರ ನವೆಂಬರ್ನಲ್ಲಿ ರಾತ್ರೋರಾತ್ರಿ ದೇಶದ 86ರಷ್ಟು ಹಣವನ್ನು ಕಾನೂನುಬಾಹಿರಗೊಳಿಸಲಾಯಿತು. `ಒಂದು ದೇಶ’, `ಒಂದು ತೆರಿಗೆ’ ಎಂದು ಐದು ಪದರಗಳ ಜಿಎಸ್ಟಿ ಎಂಬ ಟ್ಯಾಕ್ಸ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಇದು ಎರಡು ವರ್ಷಗಳ ಅವಧಿಯಲ್ಲಿ ಅಂದಾಜು 11 ಬಾರಿ ಬದಲಾವಣೆ ಕಂಡಿದೆ. ಇಂದಿಗೂ, `ಒಂದು ದೇಶ’, `ಒಂದು ತೆರಿಗೆ’ಯಿಂದ ದೂರವೇ ಉಳಿಯಲಾಗಿದೆ. ಇದರಿಂದಾಗಿ ದೇಶದ ಆರ್ಥಿಕ ಬೆಳವಣಿಗೆ ಶೇಕಡ 5ಕ್ಕೆ ಜಿಡಿಪಿ ಮಟ್ಟ ಕುಸಿದಿದೆ. ಇದನ್ನು ಭಾಜಪದ ರಾಜ್ಯಸಭಾ ಸದಸ್ಯ ಡಾ|| ಸುಬ್ರಹ್ಮಣ್ಯಂಸ್ವಾಮಿ ಅವರೇ ಹೇಳಿದ್ದಾರೆ. ಬೆಳವಣಿಗೆಯ ದರ ಶೇಕಡ 2ರಷ್ಟು ಬೆಳೆದಿಲ್ಲ. ಕಳೆದೆರಡು ದಶಕಗಳಲ್ಲಿ ಎಂದೂ ಕಾಡದ ನಿರುದ್ಯೋಗದ ಸಮಸ್ಯೆ ಇಂದು ಹೆಚ್ಚಾಗಿ ಕಾಡುತ್ತಿದೆ. ಸಾರ್ವಜನಿಕ ಬಳಕೆ ಕಳೆದುಕೊಂಡು ದಶಕದಲ್ಲಿಯೇ ಅತ್ಯಂತ ಕನಿಷ್ಠ ಎಂದು ರಾಷ್ಟ್ರೀಯ ಮಾದರಿ ಸರ್ವೇಕ್ಷಣ ಸಂಸ್ಥೆ ಹೇಳಿದೆ
ಜಾಗತಿಕ ಆರ್ಥಿಕ ಹಿಂಜರಿತವೂ ನಮ್ಮ ದೇಶದ ಅರ್ಥವ್ಯವಸ್ಥೆಯನ್ನು ಹಾಳುಗೆಡವಿದೆ ಎಂಬುದು ಸುಳ್ಳಲ್ಲ. ಆದರೆ, ಇದೊಂದೆ ಕುಂಟು ನೆಪವೂ ನಿಜವಲ್ಲ. ಕಾರಣ ಭಾರತದ ಆರ್ಥಿಕ ದರ ಶೇಕಡ 5ರಷ್ಟಿದೆ. ನೆರೆಯ ಬಾಂಗ್ಲಾ ದೇಶದ ಆರ್ಥಿಕ ದರ ಶೇಕಡ 8ರಷ್ಟಿದೆ. ಶ್ರೀಲಂಕಾದ ಆರ್ಥಿಕ ದರ ಶೇಕಡ 7ರಷ್ಟಿದೆ. ಚೀನಾ, ನೇಪಾಳ, ಭೂತಾನ್, ಮಾಲ್ಡೀವ್ಸ್ನ ಆರ್ಥಿಕ ದರ ಶೇಕಡ 5ಕ್ಕೂ ಹೆಚ್ಚಿದೆ. ಪಾಕಿಸ್ತಾನ ಮತ್ತು ಅಫಘಾನಿಸ್ತಾದ ದರ ಕೂಡ ಶೇಕಡ 5ಕ್ಕಿಂತ ಹೆಚ್ಚಿದೆ. ಆದರೂ ನಮ್ಮದು ಸುಸಜ್ಜಿತ ಸೇನೆ ಹೊಂದಿರುವ ದೇಶ. ಆದರೆ ಆರ್ಥಿಕಾಭಿವೃದ್ಧಿ ವಿಫಲಗೊಂಡಿದೆ. ಅಸಹ್ಯಕರವಾದ ಬಡತನವನ್ನು ಹೊಂದಿದೆ. ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಹೀಗೆ ದೊಡ್ಡ ಸವಾಲಿನೊಂದಿಗೆ ಬೃಹತ್ ಪ್ರಜಾಪ್ರಭುತ್ವ ಹೊಂದಿರುವ ನಮ್ಮ ದೇಶ ಸೆಣಸಾಡುತ್ತಿದೆ. ಇಷ್ಟಾದರೂ ಜಗತ್ತಿನ ಐದು ಆರ್ಥಿಕ ಕ್ರಮಾಂಕದಲ್ಲಿ ನಾವು ಕೂಡ ಒಬ್ಬರಾಗಿದ್ದೇವೆ. ಇದು ವಿಡಂಬನೆಯಲ್ಲವೆ!
ಇಂತಹ ವೈಫಲ್ಯವನ್ನು ಮುಚ್ಚಿಕೊಳ್ಳುವ ಸಲುವಾಗಿಯೇ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು ಜಾರಿಗೆ ತಂದಿದೆ ಎಂಬುದು ಕಾಂಗ್ರೆಸ್ ಮುಖಂಡರ ಅಭಿಪ್ರಾಯ. ಇರಲಿ. ದೇಶದ ಏಳು ರಾಜ್ಯಗಳಲ್ಲಿ ಅಸ್ಸಾಂ ಹೊರತುಪಡಿಸಿ ಕ್ರೈಸ್ತರೇ ಬಹುಸಂಖ್ಯೆಯಲ್ಲಿದ್ದಾರೆ. ನೆರೆಯ ಬಾಂಗ್ಲಾದೇಶ, ಪಾಕಿಸ್ತಾನ, ಅಫಘಾನಿಸ್ತಾನ, ಮ್ಯಾನ್ಮಾರ್ನಿಂದ ಬರುವ ವಲಸಿಗರಿಗೆ ಪೌರತ್ವ ದೊರೆಯುವಂತೆ ನೋಡಿಕೊಳ್ಳಲಾಗಿದೆ. 1980ರಲ್ಲಿ ಬಾಂಗ್ಲಾದಿಂದ ಬಂದಿದ್ದ ವಲಸಿಗರು ಹಿಂಸಾತ್ಮಕ ಪ್ರತಿಭಟನೆಗಳನ್ನು ಹುಟ್ಟುಹಾಕಿದ್ದರು. ಇವರನ್ನು ಹತ್ತಿಕ್ಕಲೆಂದೇ 1985ರಲ್ಲಿ `ಅಸ್ಸಾಂ ಒಪ್ಪಂದ’ವನ್ನು ಜಾರಿಗೆ ತರಲಾಯಿತು. ಇದರನ್ವಯ 1971ರ ಮಾರ್ಚ್ 24ರ ನಂತರ ನುಸುಳಿ ಬಂದವರನ್ನು ಹುಡುಕಿ ಗಡೀಪಾರು ಮಾಡಲಾಯಿತು. ಇಲ್ಲಿರುವ ಜನಾಂಗೀಯ ಸಮುದಾಯಗಳು `ಬದುಕುವ ಹಕ್ಕ’ನ್ನು ವಲಸಿಗರಿಂದಾಗಿ ಧಕ್ಕೆಗೆ ಒಳಗಾಗುವಂತಾಯಿತು. ಕಾರಣ ನೆರೆಯ ಬಾಂಗ್ಲಾದೇಶದಿಂದ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದರು. ಹೀಗಾಗಿಯೇ ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು ಜಾರಿಗೆ ತರಲಾಗಿದೆ ಎಂಬುದು ಸರ್ಕಾರದ ಸಮರ್ಥನೆಯಾಗಿದೆ. ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯು ವಿಫಲವಾಗಿತ್ತು. ಹೀಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು ತರಲಾಗಿದೆ. ಇದು ಕೂಡ ಅಸ್ಸಾಂ ಒಪ್ಪಂದ 1985ಕ್ಕೆ ಮತ್ತು ಅಸ್ಸಾಂ ಜನತೆಯ ಸಾಂಸ್ಕøತಿಕ ಮತ್ತು ಜನಾಂಗೀಯ ಅಸ್ಮಿತೆಯ ಮೇಲೆ ಧಾಳಿ ನಡೆಸಿದಂತಿದೆ.
ಪೌರತ್ವ ತಿದ್ದುಪಡಿ ಕಾಯ್ದೆ 2019, 2014ರ ಪೂರ್ವದಲ್ಲಿ ಪಾಕಿಸ್ತಾನ, ಅಫಘಾನಿಸ್ತಾನ, ಬಾಂಗ್ಲಾದೇಶಗಳಿಂದ ಹಿಂದೂ, ಕ್ರೈಸ್ತ, ಪಾರ್ಸಿ, ಜೈನ, ಬೌದ್ಧ, ಸಿಖ್ಖ್ ಧರ್ಮೀಯರು ಭಾರತಕ್ಕೆ ನುಸುಳಿದ್ದರೆ ಅಂತಹವರಿಗೆ ಮಾತ್ರ ಪೌರತ್ವ ನೀಡಲಾಗುವುದು. ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರವಾದಕೂಡಲೇ ಅಸ್ಸಾಂ ಗಣ ಪರಿಷದ್ ರಾಜ್ಯ ಸರ್ಕಾರದಿಂದ ಹೊರಬಂತು. ಇಲ್ಲಿನ ಕೃಷಿಕ್ ಮುಕ್ತಿ ಸಂಗ್ರಾಮದ ಮುಖಂಡ ಅಖಿಲ್ ಗಗೊಯ್ 2018 ಜನವರಿ 27ರಂದು ಜರುಗಿದ ರ್ಯಾಲಿಯಲ್ಲಿಯೇ ಮಸೂದೆಗೆ ಅನುಮೋದನೆ ದೊರೆತರೆ ಅಸ್ಸಾಂ ಅಖಂಡ ಭಾರತದಿಂದ ಪ್ರತ್ಯೇಕವಾಗಬೇಕಾಗುತ್ತದೆ ಎಂದಿದ್ದರು. ಇದೊಂದು ಉರಿಯೂತದ ಹೇಳಿಕೆ. ಇದು ದೇಶದ್ರೋಹದ ಸೆಕ್ಷನ್ 124-ಎ ಅಡಿಯಲ್ಲಿ ಕಾಣಬಹುದು.
ಇಷ್ಟಕ್ಕೂ ಬಾಂಗ್ಲಾದೇಶದಿಂದ ವಲಸೆ ಬಂದ ಲಕ್ಷಾಂತರ ಜನ ಅಸ್ಸಾಂ ಮತ್ತು ಇತರೆ ರಾಜ್ಯಗಳಲ್ಲಿ ಕಾನೂನುಬದ್ಧ ವಲಸಿಗರಾಗಿದ್ದಾರೆ. ಇದು ಆತಂಕ ಪಡುವ ವಿಚಾರ. ವಾಸ್ತವ ಏನೆಂದರೆ, ಕಾನೂನುಬಾಹಿರ ನಿರಾಶ್ರಿತರಿಗೆ ಪೌರತ್ವ ನೀಡುವ ಪ್ರಶ್ನೆಯೇ ಬರಬಾರದೆಂದು ಅನಿಸುವುದು ಸಹಜ. ಕಾರಣ, ಪಾಕಿಸ್ತಾ,ನ ಬಾಂಗ್ಲಾದೇಶ, ಅಫಘಾನಿಸ್ತಾನ ತಮ್ಮ ತಮ್ಮ ಸಂವಿಧಾನದಲ್ಲಿ ನಮ್ಮದು `ಇಸ್ಲಾಮಿಕ್ ಧಾರ್ಮಿಕ’ ರಾಷ್ಟ್ರಗಳೆಂದು ಘೋಷಿಸಿಕೊಂಡಿವೆ. ಹೀಗಾಗಿ ಇಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ, ವಿರೋಧ ಕೂಡ ಸಹಜವಾಗಿಯೇ ಇರುತ್ತದೆ. ಇದೊಂದು ದೋಷಪೂರಿತ ಅಭಿಪ್ರಾಯ ಅನಿಸದೆ ಕೂಡ ಇರದು.
1947ರಲ್ಲಿ ಕೆಲ ಹಿತಾಸಕ್ತಿ ಹೊಂದಿರುವವರು ದೇಶವನ್ನು ಎರಡಾಗಿ ವಿಭಜಿಸಲು ಅದೃಶ್ಯವಾಗಿ ಕಾರಣರಾದರು. ಇವತ್ತು ಇಂತಹ ಅನೇಕರ `ಅದೃಶ್ಯರ’ ಚಿಂತನೆ ಕೆಲಸಮಾಡಿದಂತಿದೆ. ಕಾಯ್ದೆ ಅಂಗೀಕಾರವಾದನಂತರ ದೇಶದ ಉದ್ದಗಲಕ್ಕೂ ಪ್ರತಿಭಟನೆಗಳು ನಡೆಯುತ್ತಿವೆ. ವಲಸಿಗರಿಗೆ ಪೌರತ್ವ ಸಿಕ್ಕರೆ ಎಲ್ಲಿ ತಮ್ಮ ಉದ್ಯೋಗ ಅವಕಾಶಗಳು ಕೈತಪ್ಪಿ ಹೋಗುವುದೋ ಎಂಬ ಭೀತಿಯೂ ಸ್ಥಳೀಯರಲ್ಲಿದೆ. ಹಾಗೆಯೇ ಸ್ಥಳೀಯ ಸಂಸ್ಕøತಿ, ಭಾಷೆ ಮತ್ತು ಜನಾಂಗೀಯ ಗುರುತಿಗೂ ಧಕ್ಕೆಯಾಗುತ್ತದೆ ಎಂಬ ಆತಂಕವೂ ಸ್ಥಳೀಯರಲ್ಲಿದೆ. `ಅಸ್ಮಿತೆ’ಯ ಕಳವಳವೇ ಗಲಭೆ, ದೊಂಬಿಗೆ ಪ್ರಮುಖ ಕಾರಣವಾಗಿದೆ.