ಮೈಸೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನನಗೆ ಜೀವಬೆದರಿಕೆ ಇದೆ ಎಂದು ಹೇಳಿ ಜನರ ವಿಶ್ವಾಸ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಅವರು ಅವರು ಹೇಳಿದ್ದಾರೆ. ಕೆ.ಆರ್ ನಗರ ತಾಲ್ಲೂಕಿನ ದೇವಿತಂದ್ರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಯಾರಿಂದ ಬೆದರಿಕೆ ಇದೆ ಎಂಬುವುದು ಗೊತ್ತಿಲ್ಲ. ಅವರ ಜನಾಂಗ ಕೂಡಾ ಅವರಿಂದ ದೂರ ಸರಿಯುತ್ತಿದೆ. ಹೀಗಾಗಿ ಅನುಕಂಪದಿಂದ ಅವರನ್ನು ಹತ್ತಿರವಾಗಲು ಹೊರಟಿದ್ದಾರೆ. ಅದಕ್ಕಾಗಿಯೇ ಅವರು ಪದೇ ಪದೇ ಕಣ್ಣೀರು ಹಾಕುತ್ತಾರೆ. ಕುಮಾರಸ್ವಾಮಿ ಅವರೇ ನಿಮಗೆ ನಿಜವಾಗಲೂ ಬೆದರಿಕೆ ಇದ್ದರೆ ದೂರು ಕೊಡಿ. ಯಾರಿಂದ ಬೆದರಿಕೆ ಪತ್ರ ಬಂದಿದೆ, ಬೆದರಿಕೆ ಕರೆ ಬಂದಿದೆ ಎಂಬ ಮಾಹಿತಿಯನ್ನು ಗೃಹ ಇಲಾಖೆ ಅಥವಾ ಮುಖ್ಯಮಂತ್ರಿಗಳಿಗೆ ದಾಖಲೆಯನ್ನು ನೀಡಿ. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ನನಗೆ ಬೆದರಿಕೆ ಕರೆ ಬಂದಿದೆ ಎಂದರೆ ಹೇಗೆ ಎಂದು ಗುಡುಗಿದರು.
ಇದೇ ವೇಳೆ ಜಮೀರ್ ಅಹ್ಮದ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಜಮೀರ್ ಬೀದಿಯಲ್ಲಿ ನಿಂತಿದ್ದ, ಎಲ್ಲೆಲ್ಲೋ ಬಸ್ ಓಡಿಸಿಕೊಂಡಿದ್ದ ಅವನನ್ನು ದೇವೇಗೌಡ ಅವರ ಕುಟುಂಬದವರು ಕರೆತಂದು ಎಂಎಲ್ಎ ಮಾಡಿದರು. ಆದರೆ ಅವರ ಬೆನ್ನಿಗೆ ಚೂರಿ ಹಾಕಿದವನು ನನ್ನ ಬಗ್ಗೆ ಮಾತನಾಡುತ್ತಾನೆ ಎಂದು ಏಕವಚನದಲ್ಲೇ ವಾಗಾಳಿ ನಡೆಸಿದರು.










