ಮೂಡಿಗೆರೆ : ಶಿಕ್ಷಕ ವೃತ್ತಿಗೆ ಸಮಾಜದಲ್ಲಿ ಅತ್ಯತ್ತಮ ಸ್ಥಾನವಿದ್ದು ಶಿಕ್ಷಕರು ಮಕ್ಕಳಿಗೆ ಮಾದರಿಯಾಗಬೇಕಿದೆ ಎಂದು ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿದರು.
ಮೂಡಿಗೆರೆಯ ಹೆಸಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಪಂಚ ವೇಗವಾಗಿ ಸಾಗುತ್ತಿದ್ದು ಮಾಹಿತಿ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಹೊಸತನಕ್ಕೆ ಶಿಕ್ಷಕರು ಒಗ್ಗಿಕೊಳ್ಳುತ್ತಾ, ಇವುಗಳ ಸದುಪಯೋಗವನ್ನು ಕುಗ್ರಾಮದ ಪ್ರತೀ ವಿದ್ಯಾರ್ಥಿಗೂ ತಲುಪುವಂತೆ ಶ್ರಮಪಡಬೇಕಿದೆ. ಶಾಲೆಗಳಲ್ಲಿ ಶಿಕ್ಷಕರು ಕೇವಲ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿರುವ ಮಕ್ಕಳನ್ನು ಮಾತ್ರ ಗುರುತಿಸದೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಯೋರ್ವನ ಓದಿನಲ್ಲಿನ ಆಸಕ್ತಿ ಆತನ ದೈಹಿಕ ಬೆಳವಣಿಗೆಯೆ ಜೊತೆಗೆ ತನ್ನ ಮನೆ ಸುತ್ತಮುತ್ತಲಿನ ವಾತಾವರಣಗಳು ಪ್ರಭಾವ ಬೀರುತ್ತವೆ. ಕೇವಲ ವರ್ತಮಾನದ ವಿಷಯಗಳನ್ನು ಆಧರಿಸಿ ಯಾವುದೇ ವಿದ್ಯಾರ್ಥಿಯ ಬುದ್ಧಿವಂತಿಕೆಯನ್ನು ಪರಿಗಣಿಸಬಾರದು ಎಂದರು.
ತಾ.ಪಂ ಸದಸ್ಯ ಕೆ.ಸಿ ರತನ್ ಮಾತನಾಡಿ ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಸಿಗುತ್ತದೆ. 75 ವರ್ಷಗಳಲ್ಲಿ ಈ ಶಾಲೆಯಲ್ಲಿ ಓದಿದ ಹಲವಾರು ಹಳೆಯ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದು ತಾವು ಓದಿ ಜೀವನ ಕಟ್ಟಿಕೊಂಡ ಈ ಶಾಲೆಯ ಅಭಿವೃದ್ದಿಗೆ ಕೂಡ ಮುಂದಾಗಬೇಕು. ಈ ಶಾಲೆಯನ್ನು ಫ್ರೌಡಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲು ಶಾಸಕರೊಂದಿಗೆ ಬೆಂಗಳೂರಿಗೆ ಹೋಗಿ ಶಿಕ್ಷಣ ಸಚಿವರೊಂದಿಗೆ ಒಂದು ಹಂತದಲ್ಲಿ ಮಾತುಕತೆ ನಡೆಸಿದ್ದೇವೆ. ಈ ವಿಚಾರವಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಣ ಮಂತ್ರಿಗಳ ಮೇಲೆ ಹೆಚ್ಚಿನ ಒತ್ತಡ ತಂದು ಆದಷ್ಟೂ ಬೇಗ ಕೆಲಸ ಮುಗಿಸಲಾಗುವುದು ಎಂದರು.
ಮಾಜಿ ಸಚಿವ ಬಿ.ಬಿ ನಿಂಗಯ್ಯ ಮಾತನಾಡಿ ನಾವು ಗಳಿಸಿದ ಆಸ್ತಿ ಯಾವ ಗಳಿಗೆಯಲ್ಲಿ ಬೇಕಾದರೂ ಕೈ ತಪ್ಪಿ ಹೋಗಬಹುದು. ಆದ್ರೆ ಕಲಿತ ವಿದ್ಯೆ ಕೊನೆಗೆವರೆಗೂ ಜೊತೆಗಿರುತ್ತದೆ. ವಿದ್ಯೆ ಬೆಲೆ ಕಟ್ಟಲಾಗದಂತಹ ಸಂಪತ್ತು, ವಿದ್ಯಾರ್ಥಿಗಳು ಇಂಥಹ ಸೂಕ್ಷ್ಮವನ್ನು ಅರಿತು ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು. ಈ ಶಾಲೆಯಲ್ಲಿ ಕಲಿತು ಉತ್ತಮ ಜೀವನ ಕಟ್ಟಿಕೊಂಡ ಹಲವಾರು ವಿದ್ಯಾರ್ಥಿಗಳು ನಮ್ಮ ಕಣ್ಣಮುಂದೆ ಇದ್ದಾರೆ. ಅಂತಹ ವಿದ್ಯೆಯನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಜೀವನ ದೊರಕಿಸಿಕೊಟ್ಟ ಶಾಲೆಗೆ 75 ವರ್ಷ ತುಂಬಿರುವುದು ಸಂತಸದ ವಿಷಯ ಎಂದರು.
ಬಳಿಕ ಶಾಸಕ ಕುಮಾರಸ್ವಾಮಿ ಅವರು ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿಯೇ ಒಗಟುಗಳನ್ನು ಕೇಳಿ ಕೆಲ ಕಾಲ ವಿದ್ಯಾರ್ಥಿಗಳೊಂದಿಗೆ ಕಳೆದರು. ಎಲ್ಲಾ ಒಗಟಿಗೆ ಉತ್ತರ ಹೇಳಿದ ವಿದ್ಯಾರ್ಥಿಗಳು ‘ಬೆಂದ್ರೆ ಹೋಗಲ್ಲ, ಹೋದ್ರೆ ಬರಲ್ಲ’ ಎಂಬ ಒಗಟಿಗೆ ವಿದ್ಯಾರ್ಥಿಗಳಿಗೆ ಉತ್ತರ ಹೇಳದಿದ್ದಾಗ ಶಾಸಕರು ಆ ಒಗಟಿಗೆ ಉತ್ತರ ‘ಮರ್ಯಾದೆ’ ಎಂದು ನಸುನಕ್ಕರು. ಶಾಸಕರು ಮತ್ತು ವಿದ್ಯಾರ್ಥಿಗಳ ನಡುವಿನ ಒಗಟು ಬಿಡಿಸುವ ಆಟ ನೋಡುಗರ ಮನಗೆದ್ದಿತು.
ಸಮಾರಂಭದಲ್ಲಿ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಮೃತ ಮಹೋತ್ಸವದ ಸವಿನೆನಪಿಗೆ ವೆಂಕಟೇಶ್ ಅವರ ಸಂಪಾದಕತ್ವದ ಅಮೃತಧಾರೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಎಸ್‍ಡಿಎಂಸಿ ಅಧ್ಯಕ್ಷ ಸುನೀಲ್, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಹೆಸಗಲ್ ಗಿರೀಶ್, ಜಿ.ಪಂ ಸದಸ್ಯೆ ಸುಧಾಯೋಗೇಶ್, ಗ್ರಾ.ಪಂ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷೆ ಜುಬೇದಾ, ಪಿಡಿಓ ಸುಮಾ, ಮುಖ್ಯ ಶಿಕ್ಷಕ ಹನುಮಂತಶೆಟ್ಟಿ, ನಿವೃತ್ತ ಶಿಕ್ಷಣ ಸಂಯೋಜಕ ಸೋಮಯ್ಯ, ನಿವೃತ್ತ ಶಿಕ್ಷಕ ಜವರಯ್ಯ, ಸ್ಮರಣ ಸಂಚಿಕೆ ಸಂಪಾದಕ ಎಚ್.ಆರ್ ವೆಂಕಟೇಶ್, ಕಾಫಿ ಬೆಳೆಗಾರ ಲೋಕೇಶ್‍ಗೌಡ, ಶೇಷೆಗೌಡ, ಮಾಜಿ ಜಿ.ಪಂ ಸದಸ್ಯ ಎಂ.ಎಸ್ ಅನಂತು, ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷ ಪುಟ್ಟರಾಜು, ತಾಲ್ಲೂಕು ಕಸಾಪ ಅಧ್ಯಕ್ಷ ಮಗಲಮಕ್ಕಿ ಗಣೇಶ್, ನವೀನ್, ರಶಾಂತ್, ರುದ್ರಯ್ಯ, ರಮೇಶ್ ಮುಂತಾದವರು ಇದ್ದರು.










