ಮೂಡಿಗೆರೆ : ಚರ್ಚ್‍ನಲ್ಲಿ ಸಂಭ್ರಮದ ವಾರ್ಷಿಕ ಹಬ್ಬ ಆಚರಣೆ…

348
firstsuddi

ಮೂಡಿಗೆರೆ : ಪಟ್ಟಣದ ಹೃದಯಭಾಗದಲ್ಲಿರುವ ಮೂಡಿಗೆರೆ ಚರ್ಚ್‍ನಲ್ಲಿ ನಿನ್ನೆ ವಾರ್ಷಿಕ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಚರ್ಚ್‍ನ ವತಿಯಿಂದ ಸಂತ ಜೋಸೆಫರ ಮೂರ್ತಿಯನ್ನು ವಿದ್ಯುತ್ ದೀಪಗಳಿಂದ ಅಲಂಕೃತವಾದ ಭವ್ಯವಾದ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕ್ರೈಸ್ಥ ಸಮುದಾಯದವರು ಮೇಣದ ಬತ್ತಿ ದೀಪಗಳನ್ನು ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರು. ಬ್ಯಾಂಡ್ ವಾದಗಳು, ಪಟಾಕಿಗಳ ಸಂಭ್ರಮದೊಂದಿಗೆ ನಡೆದ ಮೆರವಣಿಗೆಯು ಚರ್ಚ್‍ನಲ್ಲಿ ಕೊನೆಗೊಂಡಿತು.
ಮೆರವಣಿಗೆಗೂ ಮುನ್ನ ಚರ್ಚ್‍ನಲ್ಲಿ ಧರ್ಮಗುರು ಪೌಲ್ ಮಾಂಚೆದೋ ಅವರ ಸಮ್ಮುಖದಲ್ಲಿ ಭಕ್ತರು ಬಲಿಪೂಜೆ ನೆರವೇರಿಸಿದರು. ನಂತರ ನೆರದಿದ್ದ ಸಮುದಾಯದವರನ್ನು ಉದ್ದೇಶಿಸಿ ಪ್ರವಚನ ನೀಡಿದ ಧರ್ಮಗುರುಗಳು, ಸಂತ ಜೋಸೆಫರು ತಮ್ಮ ಜೀವನದಲ್ಲಿ ಯೇಸು ಸ್ವಾಮಿಯನ್ನು ಆದರ್ಶವನ್ನಾಗಿಟ್ಟುಕೊಂಡು ಅವರಂತೆ ಪರರಿಗಾಗಿ ತಮ್ಮ ಜೀವನ ಸಾಗಿಸಿದರು. ದೇವರು ತಮಗೆ ನೀಡಿದ ಅಭೂತಪೂರ್ವ ಪವಾಡಶಕ್ತಿಯಿಂದ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅವರಿಗೆ ಬೇಕಾದ ಅನುಕೂಲತೆಗಳನ್ನು ನೀಡಿದ ಮಹಾನ್ ಪುರುಷ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು ಎಂದರೆ ದೇವರಿಗೆ ಸಹಾಯ ಮಾಡುವುದು ಎನ್ನುವುದು ಅವರ ಅನಿಸಿಕೆಯಾಗಿತ್ತು. ಶತಮಾನಗಳು ಕಳೆದರೂ ಕೂಡ ಅವರ ಅದ್ವಿತೀಯ ಶಕ್ತಿ ನಮ್ಮೆಲ್ಲರನ್ನು ಕಾಪಾಡುತ್ತಿದೆ. ಒಳ್ಳೆಯ ಮನೋಭಾವದಿಂದ ಉತ್ತಮ ಕಾರ್ಯಗಳನ್ನು ಮಾಡಿದಲ್ಲಿ ದೇವರನ್ನು ಕಾಣಲು ಸಾಧ್ಯ. ಇದನ್ನು ಎಲ್ಲರೂ ಅರ್ಥೈಸಿಕೊಂಡು ಎಲ್ಲರೂ ಒಟ್ಟಾಗಿ ಸಂತಸದಿಂದ ಬಾಳೋಣ ಎಂದು ಕರೆ ನೀಡಿದರು.
ಮೂಡಿಗೆರೆ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳ ಧರ್ಮಗುರುಗಳು, ಧರ್ಮ ಭಗಿನಿಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು.