ಚಿಕ್ಕಮಗಳೂರು : ಮಕ್ಕಳು ವಿದ್ಯಾರ್ಥಿದೆಸೆಯಲ್ಲೇ ಉತ್ತಮ ಹವ್ಯಾಸ, ಒಳ್ಳೆಯ ನಡವಳಿಕೆಯನ್ನು ರೂಢಿಸಿಕೊಳ್ಳಬೇಕು : ಬಸವರಾಜ್ ಚೇಂಗಟಿ.

380
firstsuddi

ಚಿಕ್ಕಮಗಳೂರು : ಮಕ್ಕಳು ವಿದ್ಯಾರ್ಥಿದೆಸೆಯಲ್ಲೇ ಉತ್ತಮ ಹವ್ಯಾಸ, ಒಳ್ಳೆಯ ವಿಚಾರ, ಸಚ್ಚಾರಿತ್ರ್ಯ ಮತ್ತು ನಡವಳಿಕೆಯನ್ನು ರೂಢಿಸಿಕೊಳ್ಳಬೇಕು, ಆ ಮೂಲಕ ಸತ್ಪ್ರಜೆಯಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ಸಲಹೆ ಮಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ್ತು ವಾರ್ತಾ ಇಲಾಖೆ ನಗರದ ಮಲೆನಾಡು ವಿದ್ಯಾ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಏರ್ಪಡಿಸಿದ್ದ ಶಿಕ್ಷಣ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಚಿನ್ನದ ಜೀವನ ಎನ್ನುತ್ತಾರೆ ಆದರೆ ವಿದ್ಯಾರ್ಥಿಗಳಾಗಿದ್ದಾಗ ನಮಗೆ ಅದು ಗೊತ್ತಾಗುವುದಿಲ್ಲ, ನಾವು ಬೇವನ್ನು ಬಿತ್ತಿ ಮಾವನ್ನು ಬೆಳೆಯಲು ಸಾಧ್ಯವಿಲ್ಲ, ಮಾವನ್ನು ಬೆಳೆಯಬೇಕಾದರೆ ಮಾವಿನ ಬೀಜವನ್ನೇ ಬಿತ್ತಬೇಕು, ಏನನ್ನೋ ಬಿತ್ತಿ ಇನ್ನೇನನ್ನೋ ಬೆಳೆಯಲು ಸಾಧ್ಯವಾಗದು ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು ಎಂದು ಕಿವಿಮಾತು ಹೇಳಿದರು.
ನಾವು ಕೆಟ್ಟದ್ದನ್ನು ಮಾಡಿದರೆ ಅದರಿಂದ ನಮಗೇ ಕೆಟ್ಟದಾಗುತ್ತದೆ, ಪ್ರಾಮಾಣಿಕತೆ, ಉತ್ತಮ ಹವ್ಯಾಸ, ಒಳ್ಳೆಯ ನಡವಳಿಕೆ, ಉನ್ನತ ವಿಚಾರ, ಸಚ್ಚಾರಿತ್ರ್ಯ ಮತ್ತು ನಡವಳಿಕೆಯನ್ನು ರೂಡಿಸಿಕೊಂಡರೆ ಅದರಿಂದ ನಮಗೂ, ಸಮಾಜಕ್ಕೂ ಮತ್ತು ದೇಶಕ್ಕೂ ಒಳ್ಳೆಯದಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯ್ ಕುಮಾರ್ ನಮ್ಮ ಹಣೆಬರಹವನ್ನು ನಾವೇ ಬರೆದುಕೊಳ್ಳಬೇಕು, ನಮ್ಮ ಆಗುಹೋಗುಗಳಿಗೆ ನಾವೇ ಕಾರಣ ಎಂಬುದನ್ನು ವಿದ್ಯಾರ್ಥಿಗಳು ಅರಿತು ಉತ್ತಮ ಮಾರ್ಗದಲ್ಲಿ ಸಾಗಬೇಕು ಎಂದು ತಿಳಿಸಿದರು.
ಸಿವಿಲ್ ನ್ಯಾಯಾಧೀಶ ಸಿದ್ದರಾಮಪ್ಪ ಮಾತನಾಡಿದರು, ಬೀದರ್‍ನ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ್ ಪಾಟೀಲ್, ಪ್ರಕಾಶ್ ಎಸ್.ದೇಶಮುಖ್, ಶಿಕ್ಷಣ ಜಾಗೃತಿ ಕುರಿತು ಉಪನ್ಯಾಸ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಿ.ಆರ್.ಜಗಧೀಶ್, ನ್ಯಾಯವಾದಿ ಎಸ್.ಎಸ್.ವೆಂಕಟೇಶ್, ಎಂಇಎಸ್ ಆಡಳಿತಾಧಿಕಾರಿ ಎಸ್.ಶಾಂತಕುಮಾರಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ.ಎಂ.ಲೋಕೇಶ್ ಉಪಸ್ಥಿತರಿದ್ದರು.
ಶಿಕ್ಷಕರಾದ ಎನ್.ರೂಪ ಕಾರ್ಯಕ್ರಮವನ್ನು ನಿರೂಪಿಸಿದರು, ಜಿ.ಜೆ.ನವೀನ್ ಕುಮಾರ್ ಸ್ವಾಗತಿಸಿದರು, ಸದಾಶಿವ ವಂದಿಸಿದರು.