ಕಲಬುರಗಿ : ಮುಖ್ಯಮಂತ್ರಿ ಯಡಿಯೂರಪ್ಪ ಅವರು ಖಾತೆ ಹಂಚಿಕೆಯೂ ಮಾಡದಷ್ಟು ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಯಾವುದೇ ಸ್ವಾತಂತ್ರವನ್ನು ನೀಡಿಲ್ಲ. ಸದ್ಯ ಯಡಿಯೂರಪ್ಪ ಅವರು ಖಾತೆ ಹಂಚಿಕೆಯೂ ಮಾಡುವುದಕ್ಕೆ ಆಗದಷ್ಟೂ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಅಲ್ಲದೇ ಬಿ.ಎಸ್ ಯಡಿಯೂರಪ್ಪ ಅವರ ಮಂತ್ರಿಮಂಡಲ ಕೂಡಾ ಸಬ್ ಬ್ಯಾಲೆನ್ಸ್ ಆಗಿದೆ. ಸಂಪುಟ ವಿಸ್ತರಣೆಯಲ್ಲಿ ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ 13 ಜಿಲ್ಲೆಗಳಿಗೆ ಪ್ರಾಧಾನ್ಯತೆ ದೊರೆತಿಲ್ಲ. ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯವೂ ಇಲ್ಲ. ಇದರಿಂದ ಅಸಮಾಧಾನ ಹೆಚ್ಚಾಗುತ್ತದೆ. ಸರ್ಕಾರದ ಮೇಲೂ ಇದು ಪರಿಣಾಮ ಬೀರುತ್ತದೆ ಎಂದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ನೇಮಕ ವಿಳಂಬವಾಗುತ್ತಿರುವ ಬಗ್ಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವಲ್ಲಿ ಕೊಂಚ ವಿಳಂಬವಾಗಿದೆ. ಶೀಘ್ರವೇ ನೇಮಕ ಮಾಡಲಾಗುತ್ತದೆ. ಬದಲಾಗಿ ನಮ್ಮಲ್ಲಿ ಯಾವುದೇ ಭಿನ್ನಭಿಪ್ರಾಯವಿಲ್ಲ. ಎಲ್ಲವನ್ನೂ ಹೈಕಮಾಂಡ್ ನಿಧಾರಕ್ಕೆ ಬಿಟ್ಟಿದ್ದೇವೆ. ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದವರು ಯಾರು ನಮ್ಮ ಶಿಷ್ಯರಲ್ಲ. ಅವರೆಲ್ಲಾ ಬಿಜೆಪಿಗೆ ಹೋಗಿದ್ದಾರೆ. ಹೀಗಿರುವಾಗ ಅವರು ನನ್ನ ಶಿಷ್ಯರಾಗಲು ಹೇಗೆ ಸಾಧ್ಯ ಎಂದರು.










