ಬಾಗಲಕೋಟೆ : ದೆಹಲಿ ವಿಧಾನಸಭಾ ಚುನಾವಣೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಜನಪ್ರಿಯ ಯೋಜನೆಗಳ ಘೋಷಣೆಯೇ ಆಮ್ ಆದ್ಮಿ ಪಕ್ಷ ಗೆಲುವಿಗೆ ಕಾರಣ. ಜನಪ್ರಿಯ ಯೋಜನೆಗಳು ಜನರ ಮನಸ್ಸನ್ನು ಸೆಳೆದಿದೆ. ದೇಶದ ವಿಷಯ ಬಂದಾಗ ದೇಶದ ಅಖಂಡತೆ, ರಾಷ್ಟ್ರೀಯತೆ ವಿಷಯ ಬಂದಾಗ ದೆಹಲಿಯ ಜನ ಬಿಜೆಪಿ ಬೆಂಬಲಿಸಿದ್ದಾರೆ. ಪ್ರಾದೇಶಿಕ ಪಕ್ಷಗಳು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿರುವುದರಿಂದ ಅವುಗಳು ಅಧಿಕಾರಕ್ಕೆ ಬರಲು ಸಹಾಯವಾಗುತ್ತಿದೆ ಎಂದರು. ಇದೇ ವೇಳೆ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ತೊಂದರೆ ಇರುವುದರ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ರಾಜ್ಯದಲ್ಲಿ ಆರ್ಥಿಕ ತೊಂದರೆ ಇರುವುದು ನಿಜವಾದರೂ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗಳಿಂದ ಯಾವುದೇ ತೊಂದರೆಯಿಲ್ಲ. ದರಿದ್ರತನ ಆರಂಭವಾಗಿದ್ದೇ ಸಿದ್ದರಾಮಯ್ಯ ಅವರ ಅವಧಿಯಲ್ಲಿ. ಹೊಸ ಸಾಲ ತೆಗೆಯಲು ಆಗದಷ್ಟು ಸಾಲ ತೆಗೆದಿದ್ದಾರೆ. ಪ್ರಕೃತಿ ವಿಕೋಪದಿಂದ ಜನರು ಮನೆ ಕಳೆದುಕೊಂಡಿದ್ದಾರೆ, ಬೆಳೆ ನಷ್ಟ ಉಂಟಾಗಿದೆ. ಹೀಗಾಗಿ ಆರ್ಥಿಕ ತೊಂದರೆ ಆಗಿದೆ ಎಂದರು.










