ತಿರುವನಂತಪುರಂ : ಬ್ಯಾಂಕಿಗೆ ಸಾಲ ಪಡೆಯಲು ತೆರಳುತ್ತಿದ್ದ ವ್ಯಕ್ತಿ ದಾರಿ ಮಧ್ಯೆ ದಿಢೀರ್ ಕೋಟ್ಯಾಧಿಪತಿಯಾಗಿದ್ದು, ಕೇರಳದ ಕುರುಚಿಯಾ ರಾಜನ್ ಎಂಬುವವರಿಗೆ 12 ಕೋಟಿ ರೂ ಲಾಟರಿ ಹೊಡೆದಿದೆ. ರಾಜನ್ ಅವರು ಈ ಹಿಂದೆ ಮೂರು ಬಾರಿ ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡು ಇನ್ನೂ ತೀರಿಸಿರಲಿಲ್ಲ. ಆದರೆ ತಮ್ಮ ಮನೆಯ ನಿರ್ಮಾಣ ಕೆಲಸ ಅರ್ಧಕ್ಕೆ ನಿಂತಿದ್ದ ಕಾರಣ ಬ್ಯಾಂಕಿನಲ್ಲಿ ನಾಲ್ಕನೇ ಬಾರಿಗೆ ಸಾಲ ಪಡೆಯಲು ತೆರಳುತ್ತಿದ್ದರು. ಈ ವೇಳೆ ಬ್ಯಾಂಕಿಗೆ ತೆರಳುವ ಮುನ್ನ ರಾಜನ್ 300 ರೂ ಕೊಟ್ಟು ಲಾಟರಿ ಟಿಕೆಟ್ ಒಂದನ್ನು ಖರೀದಿಸಿದ್ದರು. ತಾನು ಲಾಟರಿ ಖರೀದಿಸಿರುವ ವಿಷಯ ಪತ್ನಿಗೆ ತಿಳಿದರೆ ಜಗಳ ಮಾಡುತ್ತಾರೆ ಎಂದು ಈ ಕುರಿತು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಆದರೆ ಮಂಗಳವಾರ ಬೆಳಿಗ್ಗೆ ರಾಜನ್ ಅವರಿಗೆ 12 ಕೋಟಿ ರೂ ಲಾಟರಿ ಹೊಡೆದಿದ್ದು, ಈ ಮೂಲಕ ರಾಜನ್ ಅವರು ದಿಢೀರ್ ಕೋಟ್ಯಾಧಿಪತಿಯಾಗಿದ್ದಾರೆ. ಲಾಟರಿಯಿಂದ ಹಣ ಬಂದಿರುವ ವಿಷಯ ತಿಳಿಯುತ್ತಿದ್ದಂತೆ ರಾಜನ್ ಅವರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.










