ನವದೆಹಲಿ : ಇಂದು ಇಡೀ ವಿಶ್ವವೇ ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದು, ಆದರೆ ಈ ದಿನ ಭಾರತಕ್ಕೆ ಮಾತ್ರ ಕರಾಳ ದಿನ. ಹೌದು ಕಳೆದ ವರ್ಷ ಫೆ.14 ರಂದು ಪುಲ್ವಾಮದಲ್ಲಿ ಉಗ್ರರ ಅಟ್ಟಹಾಸಕ್ಕೆ ನಮ್ಮ ಭಾರತೀಯ ಸೇನೆಯ 40 ಮಂದಿ ಸಿ.ಆರ್.ಪಿ.ಎಫ್ ಯೋಧರು ಹುತಾತ್ಮರಾಗಿದ್ದರು. ಇಂದಿಗೆ ಆ ಘಟನೆ ಸಂಭವಿಸಿ ಒಂದು ವರ್ಷ ಕಳೆದಿದೆ. ಕಳೆದ ವರ್ಷ ಫೆ.14 ರಂದು ದೇಶ ಕಾಯುವ ಕರ್ತವ್ಯದಲ್ಲಿದ್ದ ಸುಮಾರು 2,547 ಸಿ.ಆರ್.ಪಿ.ಎಫ್ ಯೋಧರನ್ನು ಹೊತ್ತು 78 ಬೆಂಗಾವಲು ವಾಹನಗಳು ಜಮ್ಮುವಿನಿಂದ ಶ್ರೀನಗರದ ಕಡೆಗೆ ಬರುತ್ತಿತ್ತು. ಈ ವೇಳೆ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರ ಬಳಿಯ ಆವಂತಿಪೊರಾ ಬಳಿ ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆತ್ಮಾಹುತಿ ದಾಳಿಕೋರನೊಬ್ಬ ಕಾರಿನಲ್ಲಿ 300 ಕೆಜಿ ಗೂ ಹೆಚ್ಚು ಸ್ಫೋಟಕಗಳನ್ನು ತುಂಬಿಕೊಂಡು ಯೋಧರು ಸಾಗುತ್ತಿದ್ದ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಪರಿಣಾಮ 40 ಮಂದಿ ಸಿ.ಆರ್.ಪಿ.ಎಫ್ ಯೋಧರು ಹುತಾತ್ಮರಾಗಿದ್ದರು. ಬಳಿಕ ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರ ದಾಟಿ ಬಾಲಕೋಟ್‍ನಲ್ಲಿ ಏರ್ ಸ್ಟ್ರೈಕ್ ಮಾಡುವ ಮೂಲಕ 300 ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿ ನಮ್ಮ ಯೋಧರ ಸಾವಿಗೆ ಪ್ರತೀಕಾರ ತೀರಿಸಿಕೊಂಡಿದೆ.
ತಂದೆ, ತಾಯಿ, ಬಂಧು ಬಳಗದವರನ್ನೆಲ್ಲಾ ಬಿಟ್ಟು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ 40 ಮಂದಿ ಸಿ.ಆರ್.ಪಿ.ಎಫ್ ಯೋಧರಿಗೆ ನಮ್ಮ ಅನಂತ ನಮನಗಳು.










