ಪುಲ್ವಾಮ ದಾಳಿಯಿಂದ ಹೆಚ್ಚು ಲಾಭ ಆಗಿದ್ದು ಯಾರಿಗೆ…? ಬಿಜೆಪಿ ಸರ್ಕಾರದಲ್ಲಿ ಯಾರು ಹೊಣೆಗಾರರಾಗಿದ್ದಾರೆ…?” -ರಾಹುಲ್ ಗಾಂಧಿ ಪ್ರಶ್ನೆ.

260
firstsuddi

ನವದೆಹಲಿ : ಒಂದು ವರ್ಷದ ಹಿಂದೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಅಟ್ಟಹಾಸಕ್ಕೆ ಹುತಾತ್ಮರಾದ 40 ಮಂದಿ ಸಿ.ಆರ್.ಪಿ.ಎಫ್ ಯೋಧರನ್ನು ಇಂದು ಇಡೀ ರಾಷ್ಟ್ರವೇ ಸ್ಮರಿಸುತ್ತಿದ್ದರೂ, ಇತ್ತ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಭಯೋತ್ಪಾದಕ ದಾಳಿಯಿಂದ ಲಾಭ ಆಗಿದ್ದು ಯಾರಿಗೆ ? ಎಂದು ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ಅವರು ತಮ್ಮ ಟ್ವಿಟ್ಟರ್ ಮೂಲಕ “ ನಾವು ಇಂದು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ 40 ಮಂದಿ ಸಿ.ಆರ್.ಪಿ.ಎಫ್. ಯೋಧರಿಗೆ ನಮನವನ್ನು ಸಲ್ಲಿಸುತ್ತೇವೆ. ಈ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳೋಣ.“ಪುಲ್ವಾಮಾ ದಾಳಿಯಿಂದ ಹೆಚ್ಚು ಲಾಭವನ್ನು ಪಡೆದವರು ಯಾರೂ? ದಾಳಿಯ ಬಗ್ಗೆ ನಡೆಸಿದ ವಿಚಾರಣೆಯ ಫಲಿತಾಂಶ ಏನು? ದಾಳಿಗೆ ಅವಕಾಶ ನೀಡಿದ ಭದ್ರತಾ ಕೊರತೆಗಳಿಗೆ ಬಿಜೆಪಿ ಸರ್ಕಾರದಲ್ಲಿ ಯಾರು ಹೊಣೆಗಾರರಾಗಿದ್ದಾರೆ ?” ಎಂದು ಬಿಜೆಪಿ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಅವರ ಟ್ವೀಟ್ ಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಬಿಜೆಪಿ ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲ್ವಿಯಾ ಅವರು ದಾಳಿಯಲ್ಲಿ ಪಾಕಿಸ್ತಾನಕ್ಕೆ ತನ್ನ ಪಾತ್ರದ ಬಗ್ಗೆ ರಾಹುಲ್ ಗಾಂಧಿ ಅವರು ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಆರೋಪಿಸಿದ್ದು, ದಾಳಿಗೆ ಅನುಮತಿ ನೀಡಿದ್ದೀರಾ? ರಾಹುಲ್ ಗಾಂಧಿ ಅವರೇ ಪುಲ್ವಾಮಾದಲ್ಲಿ ನಡೆದ ದಾಳಿಗೆ ಪಾಕಿಸ್ತಾನ ಕಾರಣವಲ್ಲ ಎಂದು ಸೂಚಿಸುತ್ತೀರಾ? ಅವರಿಗೆ ಕ್ಲೀನ್ ಚಿಟ್ ನೀಡಬೇಕು ಎಂದು ನೀವು ಯಾಕೆ ಒತ್ತಾಯಿಸುತ್ತೀರಿ? ಭಾರತೀಯ ಭದ್ರತಾ ಪಡೆಗಳು ಬಾಲಕೋಟ್‍ನಲ್ಲಿ ಭಯೋತ್ಪಾದಕರನ್ನು ಹೊರತೆಗೆಯುವುದನ್ನು ನೀವು ನೋಡಲಿಲ್ಲವೇ? ಪುಲ್ವಾಮ ದಾಳಿ ಬಳಿಕ ಭಾರತ ದೃಢನಿಶ್ಚಯದ ಕ್ರಮ ಕೈಗೊಂಡಿದ್ದರಿಂದ ನೀವು ನಿರಾಶೆಗೊಂಡಿದ್ದೀರಾ? ಎಂದು ಮಾಲ್ವಿಯಾ ಅವರು ಪ್ರಶ್ನಿಸಿದ್ದಾರೆ.

ಕಳೆದ ವರ್ಷ ಫೆ.14ರಂದು ಪುಲ್ವಾಮಾದಲ್ಲಿ ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ಬಾಂಬ್ ದಾಳಿಕೋರ ಕಾರಿನಲ್ಲಿ 300 ಕೆ.ಜಿ. ಗೂ ಅಧಿಕ ಸ್ಪೋಟಕಗಳನ್ನು ತುಂಬಿಕೊಂಡು ಸಿ.ಆರ್.ಪಿ.ಎಫ್ ಯೋಧರು ತೆರಳುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಸಿ.ಆರ್.ಪಿ.ಎಫ್ ನ 40 ಮಂದಿ ಯೋಧರು ಹುತಾತ್ಮರಾಗಿದ್ದರು. ಅವರ ವರದಿಗಳನ್ನು ಸರ್ಕಾರ ಇನ್ನೂ ಬಹಿರಂಗಪಡಿಸದಿದ್ದರೂ, ವಿಚಾರಣೆಯ ನ್ಯಾಯಾಲಯ ಮತ್ತು ಸಿಆರ್‌ಪಿಎಫ್ ನಡೆಸಿದ ಆಂತರಿಕ ತನಿಖೆಗೆ ಆದೇಶಿಸಲಾಗಿದೆ.