ಗಾಂಧೀಜಿ ಆಶ್ರಮದಲ್ಲಿ ಚರಕವನ್ನು ತಿರುಗಿಸಿ ಸಂಭ್ರಮಿಸಿದ ಟ್ರಂಪ್ ದಂಪತಿ…

353
firstsuddi

ಅಹಮದಾಬಾದ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲನಿಯಾ ಟ್ರಂಪ್ ಅವರು ಗಾಂಧೀಜಿಯವರ ತತ್ವ, ಆದರ್ಶಗಳ ಬಿಂಬವಾಗಿರುವ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಚರಕವನ್ನು ತಿರುಗಿಸಿ ಸಂಭ್ರಮಿಸಿದ್ದಾರೆ. ಇಂದು ಮಧ್ಯಾಹ್ನ ಅಹಮದಾಬಾದ್‍ನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಟ್ರಂಪ್ ದಂಪತಿ ಬಳಿಕ ಕಾರಿನಲ್ಲಿ 22 ಕಿ.ಮೀ ರೋಡ್ ಶೋ ಮುಗಿಸಿಕೊಂಡು ನೇರವಾಗಿ ಸಬರಮತಿ ಆಶ್ರಮಕ್ಕೆ ತಲುಪಿದ್ದರು. ಟ್ರಂಪ್ ಅವರು ರೋಡ್ ಶೋ ಮುಗಿಸಿಕೊಂಡು ಆಶ್ರಮಕ್ಕೆ ಆಗಮಿಸುವುದಕ್ಕೂ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರು ಆಶ್ರಮವನ್ನು ತಲುಪಿದ್ದರು. ಬಳಿಕ ಟ್ರಂಪ್ ದಂಪತಿ ಆಶ್ರಮಕ್ಕೆ ಕಾರಿನಲ್ಲಿ ಬಂದಿಳಿಯುತ್ತಿದ್ದಂತೆ ಮೋದಿ ಅವರು ಟ್ರಂಪ್ ಹಾಗೂ ಅವರ ಪತ್ನಿ ಮೆಲನಿಯಾ ಅವರಿಗೆ ಖಾದಿ ಶಾಲನ್ನು ಹೊದಿಸಿ ಸ್ವಾಗತಿಸಿದರು. ಬಳಿಕ ಗಾಂಧೀಜಿಯವರ ಭಾವಚಿತ್ರಕ್ಕೆ ಹಾರವನ್ನು ಹಾಕುವ ಮೂಲಕ ಗಾಂಧೀಜಿಯವರಿಗೆ ಗೌರವವನ್ನು ಸಲ್ಲಿಸಿದರು. ಈ ವೇಳೆ ಪ್ರಧಾನಿ ಮೋದಿ ಅವರು ಟ್ರಂಪ್ ಅವರಿಗೆ ಸಬರಮತಿ ಆಶ್ರಮ ವಿವರಣೆಯನ್ನು ನೀಡಿದರು. ಬಳಿಕ ಗಾಂಧೀಜಿಯವರು ಬಳಸುತ್ತಿದ್ದ ಚರಕವನ್ನು ತೋರಿಸುತ್ತಿದ್ದಂತೆ ಟ್ರಂಪ್ ಹಾಗೂ ಅವರ ಪತ್ನಿ ಚರಕವನ್ನು ತಿರುಗಿಸಿ ಸಂಭ್ರಮಿಸಿದರು.