ವಾಷಿಂಗ್ಟನ್ : ಭಾರತೀಯ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಅಮೆರಿಕಾದ ಲಾಸ್ ಎಂಜಲೀಸ್‍ನಲ್ಲಿ ನಡೆದಿದೆ. ಹರಿಯಾಣದ ಕರ್ನಲ್ ನಿವಾಸಿ ಮನಿಂದರ್ ಸಾಹಿ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಮನಿಂದರ್ ಅವರು ಲಾಸ್ ಎಂಜಲೀಸ್‍ನಲ್ಲಿ ಇರುವ ಸ್ಟೋರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಸ್ಟೋರ್‍ಗೆ ಮುತ್ತಿಗೆ ಹಾಕಿದ ಇಬ್ಬರು ದುಷ್ಕರ್ಮಿಗಳು ಕೌಂಟರಿನಲ್ಲಿ ಕುಳಿತಿದ್ದ ಮನಿಂದರ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಬಳಿಕ ಅಲ್ಲಿ ಇದ್ದ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಅಮೆರಿಕ ಪೊಲೀಸರು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದು, ಸದ್ಯ ಮನಿಂದರ್ ಅವರ ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬಸ್ಥರು ಕೇಂದ್ರ ಸರ್ಕಾರದ ಸಹಾಯವನ್ನು ಕೇಳಿದ್ದಾರೆ.










