ಚಿಕ್ಕಮಗಳೂರು: ಕರ್ತವ್ಯ ಲೋಪದ ಹಿನ್ನೆಲೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಪ್ರಭುರನ್ನ ಅಮಾನತು ಮಾಡಲಾಗಿದೆ. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಚಿಕ್ಕಮಗಳೂರಿನ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಸರ್ಕಾರದ ಆದೇಶಾನುಸಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸದ ಕಾರಣ ಸರ್ಕಾರದ ಆದೇಶವನ್ನ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿರುವ ಬಗ್ಗೆ ಸಾರ್ವಜನಿಕರಿಂದ ದೂರು ದಾಖಲಾಗಿತ್ತು. ಈ ಹಿನ್ನೆಲೆ ಕಡತಗಳು ಮತ್ತು ದಾಖಲಾತಿಗಳನ್ನ ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗಿತ್ತು. ತನಿಖೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಮಾರ್ಗಸೂಚಿಗನುಗುಣವಾಗಿ ಕ್ರಮವಹಿಸದೆ ಇರುವುದು ಕಂಡುಬಂದಿದೆ. ಈ ಹಿನ್ನೆಲೆ ಮೇಲಾಧಿಕಾರಿಗಳ ಸೂಚನೆಯಂತೆ ಕ್ರಮವಹಿಸದೆ ಹಾಗೂ ದೈನಂದಿನ ಕಾರ್ಯನಿರ್ವಹಣೆ ಮತ್ತು ಕಡತ ಮಂಡನೆಯಲ್ಲಿ ಸ್ವತಃ ಲಿಖಿತವಾಗಿ ಅಭಿಪ್ರಾಯವನ್ನ ಸೂಚಿಸದೆ ಸರ್ಕಾರಿ ಸೇವೆಯಲ್ಲಿ ನಿರ್ಲಕ್ಷ್ಯತನ ತೋರಿರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರು ಆಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.










