ಮೂಡಿಗೆರೆ : ಪಟ್ಟಣದ ಮಹಾತ್ಮ ಗಾಂಧಿ ಸ್ಮಾರಕ ಆಸ್ಪತ್ರೆಯ ರಸ್ತೆಯನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ ಒಂದು ತಿಂಗಳಿನಿಂದ ಆಸ್ಪತ್ರೆ ಬಲಭಾಗದ ಗೇಟ್ ಅನ್ನು ಮುಚ್ಚಿದ್ದು ಆಸ್ಪತ್ರೆಯ ಒಳಗೆ ಸಾಗಲು ರೋಗಿಗಳು ಪರದಾಡುವಂತಾಗಿದೆ.
ಹಲವಾರು ವರ್ಷಗಳಿಂದ ಹಲವರ ಬೇಡಿಕೆಯಾಗಿದ್ದ ಎಂಜಿಎಂ ಆಸ್ಪತ್ರೆಗೆ ಸಾಗುವ ರಸ್ತೆ ಹಾಗೂ ಆಸ್ಪತ್ರೆ ಪ್ರಾಂಗಣದಲ್ಲಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯ ಕೇಳಿಬಂದಿದ್ದರಿಂದ ಜಿಲ್ಲಾಡಳಿತ ಆಸ್ಪತ್ರೆಗೆ ಸಾಗುವ ಹಾಗೂ ಒಳಾಂಗಣದ ರಸ್ತೆಗಳನ್ನು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವಂತೆ ಅನುದಾನ ಬಿಡುಗಡೆಗೊಳಿಸಿತ್ತು. ಈ ಕಾರಣಕ್ಕಾಗಿ ಇಲ್ಲಿಗೆ ಒಂದು ತಿಂಗಳಿಗೆ ಸರಿಯಾಗಿ ಕೆಲಸ ಪ್ರಾರಂಭಿಸುವ ಉದ್ದೇಶದಿಂದ ಆಸ್ಪತ್ರೆಯ ಬಲಭಾಗದ ಗೇಟ್ ಮುಚ್ಚಲಾಗಿದ್ದು ಎಡಭಾಗದ ಗೇಟ್‍ನಲ್ಲಿ ತಿರುಗಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ. ಆದರೆ ಕೆಲಸ ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ಕಾಮಗಾರಿ ಮಾತ್ರ ಅನಿಷ್ಠಾನಕ್ಕೆ ಬಾರದಿರುವುದು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ.
ಈ ವಿಚಾರದ ಬಗ್ಗೆ ಮಾತನಾಡಿದ ವೃದ್ಧೆ ಸುಶೀಲಮ್ಮ ಅವರು, ವಾರಕ್ಕೆ ಎರಡು ಬಾರಿ ಆಸ್ಪತ್ರೆಗೆ ಬಂದು ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಇದೀಗ ಆಸ್ಪತ್ರೆಯ ಒಂದು ಗೇಟ್ ಮುಚ್ಚಲಾಗಿದೆ. ಕಾಂಪೌಂಡ್ ಮಧ್ಯಭಾಗದಲ್ಲಿ ಪಾದಚಾರಿಗಳಿಗೆ ಗೇಟ್ ಅಳವಡಿಸಲಾಗಿದೆಯಾದರೂ ಮೆಟ್ಟಿಲು ಹತ್ತಿ ಒಳಕ್ಕೆ ಸಾಗಬೇಕು. ಇಲ್ಲವಾದಲ್ಲಿ ಬಳಸಿಕೊಂಡು ಎಡಭಾಗದ ಗೇಟಿನಲ್ಲಿ ಸಾಗಬೇಕು. ನಡೆದಾಡಲೂ ಕಷ್ಟಕರವಾಗಿರುವ ನನಗೆ ಬಳಸಿಕೊಂಡು ಆಸ್ಪತ್ರೆಗೆ ಹೋಗಲು ಕಷ್ಟವಾಗುತ್ತಿದೆ. ಕೂಡಲೇ ರಸ್ತೆ ಕಾಮಗಾರಿ ಮುಗಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಳಲು ತೋಡಿಕೊಂಡರು.
ಹೆಸರು ಹೇಳಲಿಚ್ಚಿಸದ ಅಂಬುಲೆನ್ಸ್ ಚಾಲಕರೊಬ್ಬರು ಮಾತನಾಡುತ್ತಾ, ಹಲವು ಬಾರಿ ತುರ್ತಾಗಿ ವಾಹನವನ್ನು ಚಲಾಯಿಸಬೇಕಾದ ಅನಿವಾರ್ಯತೆ ಇರುತ್ತದೆ. ಗೇಟ್ ಮುಚ್ಚಿರುವ ಬಗ್ಗೆ ಅರಿವು ಇಲ್ಲದೆ ಏಕಾ ಏಕಿ ಆಸ್ಪತ್ರೆ ಬಲಬಾಗದ ಗೇಟ್ ಬಳಿ ವಾಹನ ಚಲಾಯಿಸಿ ಮುಜುಗರಕ್ಕೆ ಒಳಗಾಗಿದ್ದೇವೆ. ಕಾಮಾಗಾರಿ ಮಾಡುತ್ತಿರುವ ಬಗ್ಗೆ ಯಾವುದೇ ಸೂಚನಾಫಲಕಗಳನ್ನು ಅಳವಡಿಸದೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ತಾಲ್ಲೂಕು ಆಸ್ಪತ್ರೆ ಎಂದರೆ ಬಹಳ ಪ್ರಾಮುಖ್ಯತೆ ಇರುತ್ತದೆ. ಪ್ರತೀ ನಿತ್ಯ ಸಾವಿರಾರು ರೋಗಿಗಳು ಬಂದು ಹೋಗುವ ಸ್ಥಳವಾಗಿದ್ದು ಕಾಮಗಾರಿ ಬೇಗ ಮುಕ್ತಾಯಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿತ್ತು. ತುರ್ತು ಸಂದರ್ಭಗಳಲ್ಲಿ ಒಂದೊಂದು ನಿಮಿಷ ಸಹ ಗಣನೆಗೆ ಬರುತ್ತದೆ. ಮತ್ತೊಂದು ಗೇಟ್ ಬಳಸಿಕೊಂಡು ಸಾಗಲು ಸಮಯ ವ್ಯರ್ಥವಾಗುವುದರಿಂದ ತೊಂದರೆ ಹೆಚ್ಚು ಎಂದು ಅಭಿಪ್ರಾಯ ಪಟ್ಟರು.
ಸರ್ಕಾರದ ಕೆಲಸ ದೇವರ ಕೆಲಸ ಎಂಬ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಸರ್ಕಾರದ ಕೆಲಸವನ್ನು ದೇವರೇ ಬಂದು ಮಾಡಿಕೊಳ್ಳÀಲಿ ಎಂಬಂತೆ ಇಲ್ಲಿಯೂ ಕೆಲಸದ ಕುರಿತು ಅಸಡ್ಡೆ ಪ್ರದರ್ಶನ ಮಾಡಲಾಗುತ್ತಿದೆ. ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿರುವುದು ಒಳ್ಳೆಯ ಕಾರ್ಯ ಆದರೆ ಸಾರ್ವಜನಿಕರ, ವೃದ್ಧರ, ಮಹಿಳೆಯರ, ಮಕ್ಕಳ ಹಾಗೂ ರೋಗಿಗಳ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನಿಗದಿತ ಸಮಯಕ್ಕಿಂತ ಬೇಗ ಕಾಮಗಾರಿ ಮುಗಿಸಿದ್ದರೆ ಎಲ್ಲರಿಗೂ ಅನುಕೂಲವಾಗುತ್ತಿತ್ತು. ಆದರೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯತನ ಖಂಡನೀಯ ಎಂದು ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ಅವರು ಆರೋಪ ವ್ಯಕ್ತಪಡಿಸಿದರು.
ಆರೋಪ ಪ್ರತ್ಯಾರೋಪಗಳು ಏನೇ ಇದ್ದರೂ ಕಾಮಗಾರಿಯ ನಿಧಾನಗತಿಯಿಂದಾಗಿ ಪ್ರತೀನಿತ್ಯ ಕಷ್ಟಕ್ಕೆ ಒಳಗಾಗುತ್ತಿರುವವರು ಸಾರ್ವಜನಿಕರು. ಸದಾ ಜನನಿಬಿಡತೆಯಿಂದ ಕೂಡಿರುವ ತಾಲ್ಲೂಕು ಆಸ್ಪತ್ರೆ ಇಂಥಹದ್ದೊಂದು ನಿರ್ಲಕ್ಷ್ಯತೆಯ ಕಾರಣದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿ ಗುರುತಿಸಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿರುವುದಂತೂ ಸತ್ಯ.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು, ತಾಲ್ಲೂಕಿನ ಎಂ.ಜಿ.ಎಂ ಆಸ್ಪತ್ರೆಯ ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ಸಂದರ್ಭದಲ್ಲಿ ಸಾಧ್ಯವಾದಷ್ಟು ಬೇಗ ಕೆಲಸ ಮುಗಿಸಬೇಕು ಎಂದು ಸೂಚನೆ ನೀಡಲಾಗಿತ್ತು. ಬೇಗ ಕಾಮಗಾರಿ ಮುಗಿಸಿಕೊಡುವಂತೆ ಒತ್ತಡ ಹೇರಲಾಗುವುದು ಎಂದು ಹೇಳಿದ್ದಾರೆ.










