ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಹಾಯ ಮಾಡಲು ಮುಂದಾದ Infosys ಅಧ್ಯಕ್ಷೆ, ನಿಜವಾದ ಮಾತೃ ಕಾಳಜಿ ಈ ಮಹಾತಾಯಿಯದು ಎಂದ ಸಚಿವ ಸುರೇಶ್ ಕುಮಾರ್.

182
firstsuddi

ಬೆಂಗಳೂರು : ಇಡೀ ವಿಶ್ವವೇ ಮಹಮಾರಿ ಕೊರೊನಾ ವೈರಸ್‍ನಿಂದ ತತ್ತರಿಸಿದ್ದು, ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಅಲ್ಲದೇ ಈಗಾಗಲೇ ಕಲಬುರಗಿಯಲ್ಲಿ ಓರ್ವ ವೃದ್ಧ ಮಹಾಮಾರಿ ಕೊರೊನಾ ವೈರಸ್‍ನಿಂದ ಮೃತಪಟ್ಟಿರುವುದಾಗಿ ದೃಢಪಟ್ಟಿದೆ. ಈ ನಡುವೆ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅವರು ತಮ್ಮ ಸಹೃದಯತೆಯಿಂದ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಅವರ ಈ ಹೃದಯವಂತಿಕೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸುರೇಶ್ ಕುಮಾರ್ ಅವರ ಫೇಸ್ ಬುಕ್‍ನಲ್ಲಿ “ ನಿನ್ನೆ ಬೆಳಿಗ್ಗೆ ನನಗೆ Infosys foundation ಕಛೇರಿಯಿಂದ ಕರೆ ಬಂದಿತ್ತು. ಶ್ರೀಮತಿ ಸುಧಾಮೂರ್ತಿಯವರು ಮಾತನಾಡಿ ದೇಶ-ವಿದೇಶಗಳಲ್ಲಿ ಆತಂಕ ತಂದಿರುವ ಕೊರೊನಾ ವೈರಸ್ ವ್ಯಾಪಕವಾಗಿ ಹರಡದಂತೆ ನಮ್ಮ ರಾಜ್ಯದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು. ಒಂದು ಆಸ್ಪತ್ರೆಯನ್ನು ತಮಗೆ ವಹಿಸಿದರೆ ಅದನ್ನು ಕೊರೊನಾ ವೈರಸ್ ಚಿಕಿತ್ಸೆಗಾಗಿ ತಮ್ಮ ಸಂಸ್ಥೆಯ ವೆಚ್ಚದಲ್ಲಿ ಪೂರ್ಣಪ್ರಮಾಣದಲ್ಲಿ ಸಜ್ಜುಗೊಳಿಸುವುದಾಗಿ, ಅಗತ್ಯ ಉಪಕರಣಗಳನ್ನೂ ಒದಗಿಸುವುದಾಗಿ ಹೇಳಿದರು. ಅಷ್ಠ ಅಲ್ಲ, ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಆರೋಗ್ಯ ಸಚಿವ ಶ್ರೀ ರಾಮುಲು ರೊಂದಿಗೂ ತಮ್ಮ ಈ ಪಾತ್ರದ ಕುರಿತು ಚರ್ಚಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಬರೆದಿದ್ದಾರೆ. ಸದ್ಯದಲ್ಲಿಯೇ ಈ ಕುರಿತು ಉನ್ನತ ಮಟ್ಟದ ಸಭೆ ನಡೆಯಲದೆ. ನಿನ್ನೆ ಸಂಜೆ ಸುಧಾಮೂರ್ತಿಯವರಿಗೆ ಫೋನ್ ಮಾಡಿ ನಮ್ಮ ಶಿಕ್ಷಣ ಇಲಾಖೆಯಲ್ಲಿ ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳಿಗೆ ರಜೆ ಘೋಷಿಸಿರುವ ಕ್ರಮ ವಿವರಿಸಿದೆ. ಇಷ್ಟು ಬೇಗ ಕ್ರಮ ತೆಗೆದುಕೊಂಡಿರುವ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದರು. ಈ ಹೃದಯವಂತಿಕೆ ನನ್ನ ಹೃದಯ ತುಂಬಿತು. ನಿಜವಾದ ಮಾತೃ ಕಾಳಜಿ ಈ ಮಹಾತಾಯಿಯದು” ಎಂದು ಬರೆದುಕೊಂಡಿದ್ದಾರೆ.