ಕೊಟ್ಟ ಮಾತನ್ನು ಉಳಿಸಿಕೊಂಡ ನಟ ಜಗ್ಗೇಶ್-ನಿರ್ಭಯಾ ಅತ್ಯಾಚಾರಿಗಳ ಹ್ಯಾಂಗ್‍ಮ್ಯಾನ್ ಗೆ 1ಲಕ್ಷ ರೂ ದೇಣಿಗೆ…

399
firstsuddi

ಬೆಂಗಳೂರು : ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದಂತೆ 7 ವರ್ಷಗಳ ಬಳಿಕ ನಿರ್ಭಯಾ ಸಾವಿಗೆ ಇಂದು ನ್ಯಾಯ ದೊರಕಿದ್ದು, ತಿಹಾರ್ ಜೈಲಿನಲ್ಲಿ ಇಂದು ಬೆಳಿಗ್ಗೆ 5:30ಕ್ಕೆ ನಾಲ್ವರು ಆರೋಪಿಗಳನ್ನು ಗಲ್ಲಿಗೇರಿಸಲಾಗಿದೆ. ಈ ನಡುವೆ ಸ್ಯಾಂಡಲ್‍ವುಡ್ ನಟ ಜಗ್ಗೇಶ್ ಅವರು ಈ ಹಿಂದೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದು, ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿದ ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್ ಅವರಿ 1 ಲಕ್ಷ ರೂ ಹಣವನ್ನು ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಜಗ್ಗೇಶ್ ಅವರು, “ ಕೊಟ್ಟ ಮಾತಿನಂತೆ 1 ಲಕ್ಷ ರೂ ನಿರ್ಭಯಾ ಹ್ಯಾಂಗ್‍ಮ್ಯಾನ್ ಗೆ ನನ್ನ ದೇಣಿಗೆ. ದೇವನೊಬ್ಬನಿರುವ ಅವ ಎಲ್ಲ ನೋಡುತಿರುವ. ಸತ್ಯದ ಹಾದಿಯಲ್ಲಿ ನಡೆದವಗೆ ಭಯವಿಲ್ಲಾ. ಅಸತ್ಯದ ಮಾರ್ಗಕ್ಕೆ ಶಿಕ್ಷೆ ತಪ್ಪೊಲ್ಲಾ. ಈ ದಿನಕ್ಕೆ ಹಲ್ಲುಕಚ್ಚಿ ಎಂದು ಅಂತ್ಯ ದುಷ್ಟ ಕ್ರಿಮಿಗಳಿಗೆ ಎಂದು ಕಾಯುತ್ತಿದ್ದೆ, ಸುದ್ದಿ ಕೇಳಲು ನಿದ್ರೆ ಮಾಡದೆ ಕಾದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಹಿಂದೆ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲಿಗೇರಿಸಲು ಪವನ್ ಜಲ್ಲಾದ್ ಅವರಿಗೆ ಅವಕಾಶ ನೀಡಲಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಪವನ್ ಜಲ್ಲಾದ್ ಅವರು ನನ್ನ ಮಗಳ ಮದುವೆ ಮಾಡಲು ನನಗೆ ಸಿಕ್ಕ ಅವಕಾಶ ಎಂದು ತಿಳಿಸಿದ್ದರು. ಈ ಮಾತನ್ನು ಕೇಳಿದ ಜಗ್ಗೇಶ್ ಅವರು ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಿದರೆ 1 ಲಕ್ಷ ರೂ ದೇಣಿಗೆ ನೀಡುವುದಾಗಿ ತಿಳಿಸಿದ್ದರು. ಅದರಂತೆ ಇಂದು ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸುತ್ತಿದ್ದಂತೆ ಜಗ್ಗೇಶ್ ಅವರು ಪವನ್ ಜಲ್ಲಾದ್ ಅವರಿಗೆ 1 ಲಕ್ಷ ರೂ ಹಣವನ್ನು ನೀಡಿದ್ದಾರೆ.