ಬಹುಮತ ಸಾಬೀತಿಗೂ ಮುನ್ನವೇ ಸಿಎಂ ಸ್ಥಾನಕ್ಕೆ ಕಮಲ್ ನಾಥ್ ಅವರು ರಾಜೀನಾಮೆ…

214
firstsuddi

ನವದೆಹಲಿ : ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರು ಇಂದು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಮೂಲಕ ಮಧ್ಯಪ್ರದೇಶದಲ್ಲಿ ಬಿಜೆಪಿ ಆಡಳಿತ ನಡೆಸಲು ಮುಂದಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿಕೊಂಡಿದ್ದರು. ಅಲ್ಲದೇ ಜ್ಯೋತಿರಾದಿತ್ಯ ಸಿಂಧಿಯಾ ಅವರು ರಾಜೀನಾಮೆ ನೀಡುತ್ತಿದ್ದಂತೆ ಅವರ ಆಪ್ತರಾಗಿದ್ದ 22 ಮಂದಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಕಮಲ್ ನಾಥ್ ಅವರ ಸರ್ಕಾರ ಬಹುಮತವನ್ನು ಕಳೆದುಕೊಂಡಿತ್ತು. ಬಳಿಕ ಸುಪ್ರೀಂ ಕೋರ್ಟ್ ಆದೇಶದಂತೆ ಕಮಲ್ ನಾಥ್ ಅವರ ಸರ್ಕಾರ ಇಂದು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಬೇಕಿತ್ತು. ಆದರೆ ಬಹುಮತ ಸಾಬೀತು ಪಡಿಸುವುದಕ್ಕೂ ಮುನ್ನವೇ ಕಮಲ್ ನಾಥ್ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜ್ಯಪಾಲರಾದ ಲಾಲ್‍ಜಿ ಟಂಡನ್ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.