ಚೆನ್ನೈ : ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್ಡೌನ್ ಮಾಡಿ ಆದೇಶ ಹೊರಡಿಸಿದ್ದು, ಹೀಗಿದ್ದರೂ ಕೆಲವು ಕಡೆ ಸಾರ್ವಜನಿಕರು ಆದೇಶವನ್ನು ಉಲ್ಲಂಘಿಸಿ ರಸ್ತೆಯಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದಾರೆ. ಇದನ್ನು ತಡೆಯಲು ಪೊಲೀಸರು ರಸ್ತೆಯಲ್ಲಿ ಅನಗತ್ಯವಾಗಿ ತಿರುಗಾಡುವವರಿಗೆ ಲಾಠಿ ಏಟು, ಬಸ್ಕಿ ಹೊಡೆಸುವ ಶಿಕ್ಷೆಯನ್ನೆಲ್ಲಾ ನೀಡಿದ್ದಾರೆ. ಆದರೆ ಸಾರ್ವಜನಿಕರು ಇದ್ಯಾವುದಕ್ಕೂ ಬಗ್ಗದೆ ಇರುವುದರಿಂದ ಚೆನ್ನೈ ಪೊಲೀಸರು ವಿಭಿನ್ನ ರೀತಿಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಿದ್ದಾರೆ. ಪೊಲೀಸರು ಸ್ಥಳೀಯ ಕಲಾವಿದರ ಸಹಾಯದೊಂದಿಗೆ ಕೊರೊನಾ ಹೆಲ್ಮೆಟ್ನ್ನು ತಯಾರಿಸಿ ಅದನ್ನು ಧರಿಸಿಕೊಂಡು ರಸ್ತೆಯಲ್ಲಿ ಅನಗತ್ಯವಾಗಿ ತಿರುಗಾಡುವವರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ಡೌನ್ ಮಾಡಿ ಆದೇಶ ಹೊರಡಿಸಿ ಕಠಿಣ ಕ್ರಮಗಳನ್ನು ಕೈಗೊಂಡರು ಸಾರ್ವಜನಿಕರು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ರಸ್ತೆಯಲ್ಲಿ ಬೇಕಾಬಿಟ್ಟಿ ಸುತ್ತಾಡುತ್ತಿದ್ದಾರೆ. ಹೀಗಾಗಿ ನಾವು ಹಳೆಯ ಹೆಲ್ಮೆಟ್ ಹಾಗೂ ಪೇಪರ್ ಬಳಸಿಕೊಂಡು ಕೊರೊನಾ ಹೆಲ್ಮೆಟ್ ತಯಾರಿಸಿದ್ದೇವೆ. ಅಲ್ಲದೇ ಅದನ್ನು ಧರಿಸಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ. ಹೊರಗೆ ಬರಬೇಡಿ, ಮನೆಯಲ್ಲೇ ಇರಿ ಎಂದು ಕೈ ಮುಗಿದು ಕೇಳಿಕೊಂಡರೂ ಸಾರ್ವಜನಿಕರು ಕೇಳುತ್ತಿರಲಿಲ್ಲ. ಆದರೆ ಈ ಕೊರೊನಾ ಹೆಲ್ಮೆಟ್ನಿಂದ ಜನರು ಜಾಗೃತರಾಗಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಲು ಈ ಹೆಲ್ಮೆಟ್ ಬಹಳ ಸಹಕಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.










