ಮಡಿಕೇರಿ : ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಸವನ್ನೇ ಲಾಕ್‍ಡೌನ್ ಮಾಡಿದ್ದು, ಹೀಗಾಗಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆಗಳು ಇಲ್ಲದೇ ಮಾರುಕಟ್ಟೆಗೆ ಮಾರಾಟ ಮಾಡಲಾಗದೇ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ನಿವೃತ್ತ ಸೈನಿಕರೊಬ್ಬರು ತಮ್ಮ 1 ಎಕರೆ ಹೊಲದಲ್ಲಿ ಬೆಳೆದಿದ್ದ ಹಸಿರು ಮೆಣಸಿನಕಾಯಿಯನ್ನು ತಂದು ರಸ್ತೆಗೆ ಸುರಿದಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ನಿವಾಸಿ ನಿವೃತ್ತ ಯೋಧ ದೇವರಾಜು ಅವರು, ತಮ್ಮ ಹೊಲದಲ್ಲಿ ಬೆಳೆದಿದ್ದ ಹಸಿರು ಮೆಣಸಿನಕಾಯಿ ಕಟಾವಿಗೆ ಬಂದಿತ್ತು. ಆದರೆ ದೇಶಾದ್ಯಂತ ಲಾಕ್‍ಡೌನ್ ಆಗಿರುವ ಹಿನ್ನೆಲೆ, ಬೆಳೆಗಳನ್ನು ಖರೀದಿಸುವವರು ಯಾರು ಇಲ್ಲದೆ ಇರುವುದರಿಂದ ಮೆಣಸಿನಕಾಯಿ ಹಣ್ಣಾಗಿ ಕೊಳೆತು ಹೋಗುವ ಸ್ಥಿತಿ ತಲುಪಿತ್ತು. ಇದನ್ನು ಕಂಡ ದೇವರಾಜು ಅವರು ಸುಮಾರು 20 ಕೆ.ಜಿ ತೂಕದ 10 ಚೀಲದಷ್ಟು ಮೆಣಸಿಕಾಯಿಯನ್ನು ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ಸುರಿದು ಜನರಿಗೆ ಉಚಿತವಾಗಿ ತೆಗೆದುಕೊಂಡು ಹೋಗುವಂತೆ ಕೂಗಿ ಹೇಳಿದ್ದಾರೆ. ಕೂಡಲೇ ಮೆಣಸಿನಕಾಯಿಯನ್ನು ಕಂಡು ಮುಗಿಬಿದ್ದ ಜನರು ಒಂದು ಮೆಣಸಿನಕಾಯಿಯನ್ನು ಬಿಡದೆ ಬಾಚಿಕೊಂಡು ಹೋಗಿದ್ದಾರೆ.










