ಮೂಡಿಗೆರೆ ; ರಸ್ತೆ ಕಾಮಗಾರಿಗಾಗಿ ದೂರದ ಹಾವೇರಿಯಿಂದ 20 ಕ್ಕೂ ಹೆಚ್ಚು ಕಾರ್ಮಿಕರು ತಿಂಗಳ ಹಿಂದೆ ಕೊಟ್ಟಿಗೆಹಾರಕ್ಕೆ ಬಂದಿದ್ದು ಲಾಕ್ ಡೌನ್ ಹಿನ್ನಲೆಯಲ್ಲಿ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿರುವುದರಿಂದ ಊರಿಗೂ ಹಿಂದಿರುಗಲಾಗದೇ ಬಿಡಾರದಲ್ಲೆ ದಿನ ಕಳೆಯುವಂತಾಗಿದೆ.
ಬಣಕಲ್ ಮತ್ತು ಕೊಟಿಗೆಹಾರ ಹೆದ್ದಾರಿ ಮದ್ಯೆ ಹೆದ್ದಾರಿ ಬದಿಯ ಬಯಲಿನಲ್ಲಿ 20 ಕ್ಕೂ ಹೆಚ್ಚು ಕಾರ್ಮಿಕರು ಬಿಡಾರ ಹಾಕಿಕೊಂಡಿದ್ದು, ಕೊಟ್ಟಿಗೆಹಾರ ಸುತ್ತಮುತ್ತಾ ರಸ್ತೆ ಕಾಮಗಾರಿಯ ಕೆಲಸಕ್ಕೆ ಹೋಗುತ್ತಿದ್ದರು. ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲಸವೂ ಇಲ್ಲದೇ ಊರಿಗೆ ಹೋಗಲು ವಾಹನ ಸೌಕರ್ಯ ಇಲ್ಲದಿರುವುದರಿಂದ ಅತಂತ್ರ ಸ್ಥಿತಿಯಲ್ಲಿದ್ದಾರೆ. ಕಾರ್ಮಿಕ ದಾದಾಪೀರ್ ಅವರು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿ ಹೆಂಡತಿ ಮಕ್ಕಳೊಡನೆ ಕಾರ್ಮಿಕರು ಇಲ್ಲಿಗೆ ಕೂಲಿ ಮಾಡಲು ಬಂದಿದ್ದೇವೆ. ಈಗ ಕೆಲಸವೂ ಇಲ್ಲ. ಬಿಡಾರದಲ್ಲಿಯೇ ದಿನ ಕಳೆಯುವುದು ಕಷ್ಟವಾಗಿದೆ. ಬಿಸಿಲ ಝಳ ಹೆಚ್ಚಿದ್ದು ,ಮಕ್ಕಳು ಇದರಿಂದ ಆಯಾಸಗೊಳುತ್ತಿದ್ದಾರೆ. ಸರ್ಕಾರ ಊರಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಸ್ಥಳಕ್ಕೆ ಆರೋಗ್ಯ ಅಧಿಕಾರಿಗಳ ಬೇಟಿ, ಆರೋಗ್ಯ ತಪಾಸಣೆ :
ಹಾವೇರಿ ಮೂಲದ ಕಾರ್ಮಿಕರು ಬಿಡಾರ ಹಾಕಿರುವ ಸ್ಥಳಕ್ಕೆ ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಕ್ಲಾಸ್ ಅಹಮದ್, ಬಣಕಲ್ ಗ್ರಾ.ಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ, ಪಿಡಿಓ ಕೃಷ್ಣಪ್ಪ ಅವರು ಬೇಟಿ ನೀಡಿದರು.
ವೈದ್ಯಾಧಿಕಾರಿ ಇಕ್ಲಾಸ್ ಅಹಮದ್ ಅವರು ಮಾತನಾಡಿ ಹಾವೇರಿ ಮೂಲದ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿದ್ದು ಯಾರಿಗೂ ಆರೋಗ್ಯ ಸಮಸ್ಯೆ ಇಲ್ಲ. ಕಾರ್ಮಿಕರಿಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಬಣಕಲ್ ಗ್ರಾ.ಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ ಅವರು ಮಾತನಾಡಿ ಲಾಕ್‍ಡೌನ್ ಮುಗಿಯುವವರೆಗೂ ಕಾರ್ಮಿಕರನ್ನು ಊರಿಗೆ ಕಳುಹಿಸಲು ಸಾಧ್ಯವಿಲ್ಲ. ಕಾರ್ಮಿಕರಿಗೆ ಕೆಲಸ ನೀಡಿದ ಗುತ್ತಿಗೆದಾರರು ಊಟ ಮತ್ತಿತ್ತರ ಮೂಲಭೂತ ಸೌಕರ್ಯಗಳನ್ನು ನೀಡುವುದಾಗಿ ತಿಳಿಸಿದ್ದು, ಬಿಡಾರಗಳನ್ನು ದೂರ ದೂರಕ್ಕೆ ಹಾಕಲು ತಿಳಿಸಲಾಗಿದೆ ಎಂದರು.