ಬೆಂಗಳೂರು : ನಿನ್ನೆ ಜಮ್ಮು ಕಾಶ್ಮೀರದಲ್ಲಿ ಸಂಭವಿಸಿದ ಉಗ್ರರು ಹಾಗೂ ಯೋಧರ ನಡುವಿನ ಗುಂಡಿನ ದಾಳಿಯಲ್ಲಿ ಐವರು ಭಾರತೀಯ ಯೋಧರು ಹುತಾತ್ಮರಾಗಿದ್ದು, ಅಲ್ಲದೇ ಇದಕ್ಕೆ ಪ್ರತಿಯಾಗಿ ಐವರು ಉಗ್ರರನ್ನು ಭರತೀಯ ಯೋಧರು ಹೊಡೆದುರುಳಿಸಿದ್ದರ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಹುತಾತ್ಮರಾದ ಸೈನಿಕರಿಗೆ ಸಂತಾಪ ಸೂಚಿಸಿದ್ದಾರೆ. “ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಭಾರತದ ಒಳ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಐದು ನುಸುಳುಕೋರರ ವಿರುದ್ಧ ಭಾರತೀಯ ಸೇನೆ ಇಂದು ಯಶಸ್ವಿ ಮಿಲಿಟರಿ ಕಾರ್ಯಚರಣೆ ನಡೆಸಿದ್ದು, ಎಲ್ಲರನ್ನೂ ಹೊಡೆದುರುಳಿಸಿದೆ. ಕಾಳಗದಲ್ಲಿ ಐವರು ಭಾರತೀಯ ಸೈನಿಕರು ಮಡಿದರೆಂಬುದು ತೀವ್ರ ನೋವು ತರಿಸಿದೆ. ಭಾರತಕ್ಕೆ ನುಸುಳಲು ಕಾಶ್ಮೀರದ ಅತಿ ಎತ್ತರದ, ಹಿಮ ಸುರಿಯುವ ಪ್ರದೇಶವನ್ನು ಉಗ್ರರು ಆಯ್ಕೆ ಮಾಡಿಕೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಅತ್ಯಂತ ಪ್ರತಿಕೂಲ ವಾತಾವರಣದಲ್ಲೂ ಭಾರತೀಯ ಯೋಧರು ಶೌರ್ಯದಿಂದ ಉಗ್ರರನ್ನು ಹಿಮ್ಮೆಟ್ಟಿಸಿದ್ದಾರೆ. ಈ ಕಾಳಗದಲ್ಲಿ ಪ್ರಾಣ ತ್ಯಾಗ ಮಾಡಿದ ಐವರು ಸೈನಿಕರಿಗೆ ನನ್ನ ಸಂತಾಪಗಳು.”
“ಐವರು ಸೈನಿಕರ ಬಲಿದಾನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನುಸುಳುಕೋರರ ವಿರುದ್ಧ ಮತ್ತಷ್ಟು ನಿಖರ ಕಾರ್ಯಾಚರಣೆಗಳನ್ನು ಭಾರತ ನಡೆಸಬೇಕು. ಈ ಮೂಲಕ ಗಡಿ ನಿಯಂತ್ರಣ ರೇಖೆಯಲ್ಲಿ ಆಗಾಗ ನಡೆಯುವ ಇಂಥ ಘಟನೆಗಳಲ್ಲಿ ಭಾರತೀಯ ಯೋಧರು ಪ್ರಾಣ ಕಳೆದುಕೊಳ್ಳುವ ಸನ್ನಿವೇಶವನ್ನು ತಪ್ಪಿಸಬೇಕು. ಉಗ್ರರ ಹೆಡೆಮುರಿ ಕಟ್ಟಬೇಕು. ಭಾರತದ ವಿರುದ್ಧ ತನ್ನ ನೆಲದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳನ್ನು ವಿಶ್ವದ ಹಲವು ರಾಷ್ಟ್ರಗಳ ಎಚ್ಚರಿಕೆಯ ಹೊರತಾಗಿಯೂ ಪಾಕಿಸ್ತಾನ ನಿಯಂತ್ರಿಸಿಲ್ಲ. ಇದಕ್ಕಾಗಿ ಭಾರತ ಪಾಕಿಸ್ತಾನಕ್ಕೆ ತಕ್ಕಶಾಸ್ತಿ ಮಾಡಬೇಕಾದ ಅಗತ್ಯ ಎದುರಾಗಿದೆ. ಈ ಮೂಲಕ ಐವರು ವೀರ ಯೋಧರ ಆತ್ಮಕ್ಕೆ ಶಾಂತಿ ತಂದುಕೊಡಬೇಕಿದೆ.”










