ವಾಷಿಂಗ್ಟನ್ : ಕೊರೊನಾ ವಿರುದ್ಧ ಪರಿಣಾಮಕಾರಿ ಔಷಧಿ ಎಂದು ಹೇಳಲಾಗುತ್ತಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿರುವ ಭಾರತ ಸರ್ಕಾರಕ್ಕೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಧನ್ಯವಾದವನ್ನು ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, “ಅಗತ್ಯ ಸಂದರ್ಭಗಳಲ್ಲಿ ಸ್ನೇಹಿತರ ನಡುವೆ ಇನ್ನೂ ಹೆಚ್ಚಿನ ಸಹಕಾರದ ಅಗತ್ಯವಿದೆ. ಭಾರತದ ನಿರ್ಧಾರವನ್ನು ಎಂದಿಗೂ ಮರೆಯಲಾಗುವುದಿಲ್ಲ. ಈ ಹೋರಾಟದಲ್ಲಿ ಭಾರತದ ಜನರಿಗೆ ಮಾತ್ರವಲ್ಲ, ಮಾನವೀಯತೆಗೂ ಸಹಾಯ ಮಾಡುವ ಮೂಲಕ ಪ್ರಬಲ ನಾಯಕತ್ವ ವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರು, ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ಬಳಸುವ ಮಲೇರಿಯಾ ವಿರೋಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮೇಲಿನ ನಿರ್ಬಂಧವನ್ನು ಹಿಂಪಡೆಯದಿದ್ದರೆ ಪ್ರತೀಕಾರದ ಸಾಧ್ಯತೆಯಿದೆ ಎಂದು ಭಾರತಕ್ಕೆ ಎಚ್ಚರಿಸಿದ್ದರು. ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹೈಡ್ರಾಕ್ಸಿಕ್ಲೋರೋಕ್ಸಿನ್ ರಫ್ತು ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದ್ದು, ಗುಜರಾತ್ನ ಮೂರು ಕಾರ್ಖಾನೆಗಳಿಂದ ಒಟ್ಟು 29 ಮಿಲಿಯನ್ ಡೋಸ್ ಹೈಡ್ರಾಕ್ಸಿಕ್ಲೋರೋಕ್ಸಿನ್ ಔಷಧಗಳನ್ನು ತುಂಬಿದ್ದ ಹಡಗು ಅಮೇರಿಕಾದತ್ತ ತೆರಳುತ್ತಿದೆ ಎಂಬ ಮಾಹಿತಿಯನ್ನು ತಿಳಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಮೊದಲು ನೀಡಿದ ಎಚ್ಚರಿಕೆಯ ವರಸೆಯನ್ನು ಬದಲಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ.
ಅಲ್ಲದೇ ಅಮೆರಿಕಾ ಅಧ್ಯಕ್ಷ ಮಾಡಿರುವ ಟ್ವೀಟ್ಗೆ ಪ್ರತಿಕ್ರಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ತುರ್ತು ಸಮಯದಲ್ಲಿ ಸ್ನೇಹಿತರ ನಡುವಿನ ಸಹಕಾರ ಅಗತ್ಯ ಎಂಬ ನಿಮ್ಮ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ. ಭಾರತ ಹಾಗೂ ಅಮೆರಿಕಾದ ಸಂಬಂಧ ಈ ಹಿಂದಿನಿಂದಲೂ ಗಟ್ಟಿಯಾಗಿದೆ. ಕೊರೊನಾ ವಿರುದ್ಧ ಹೋರಾಟದಲ್ಲಿ ಗೆಲುವು ಸಾಧಿಸಲು ಭಾರತ ತನ್ನಿಂದ ಆಗುವ ಎಲ್ಲಾ ಸಹಕಾರವನ್ನು ನೀಡಲು ಸಿದ್ದ. ನಾವು ಇದನ್ನು ಒಟ್ಟಾಗಿ ಗೆಲ್ಲುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.










