ಮೂಡಿಗೆರೆ : ಆ ಖಾಕಿಯ ಕಣ್ಣಲ್ಲಿ ನೀರು ಬರಲಿಲ್ಲ…ಮಾತಿನ ಧ್ವನಿಯಲ್ಲಿ ಕಣ್ಣೀರು ಹೊರ ಬರುತ್ತಿತ್ತು…

3556
firstsuddi
  • ಸಂಪಾದಕ : ರಾಘವೇಂದ್ರ ಕೆಸವಳಲು 

ಮೂಡಿಗೆರೆ : ಮೊನ್ನೆ ಸಂಜೆ 7.30ರ ಸಮಯದಲ್ಲಿ ಕಚೇರಿಯಿಂದ ಮನೆಗೆ ಹೋಗೋಣವೆಂದು ಹೊರಟೆ. ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ಬಳಿ ಹೋಗುತ್ತಿದ್ದಂತೆ ಕೊರೋನ ಡ್ಯೂಟಿ ಪೊಲೀಸರು ಕೈ ಅಡ್ಡ ಹಾಕಿದ್ದರು. ಅಲ್ಲಿದ್ದ ಪೇದೆ ರಾಘಣ್ಣ ನೀವಾ ಅಂದರು, ಹಾಗೇ ಕಾರನ್ನು ಸೈಡಿಗೆ ಹಾಕಿ ಮಾತನಾಡಲು ಶುರು ಮಾಡುದ್ವಿ, ಹೇಗಿದೆ ಅರುಣ್ (ಹೆಸರು ಬದಲಿಸಲಾಗಿದೆ) ಡ್ಯೂಟಿ ಅಂದೆ. ಆತ ಕೂಡ, ಜನ ಬರಬೇಡಿ ಅಂದ್ರು ಬರ್ತಾರೆ. ಈ ಕೊರೊನಾದ ಬಗ್ಗೆ ಅಷ್ಟಾಗಿ ಇನ್ನು ಕೆಲವರಿಗೆ ಗೊತ್ತಿಲ್ಲ, ಕೆಲವರಿಗೆ ಹೇಳಿದರೆ ಅರ್ಥ ಆಗಲ್ಲ ರಾಘಣ್ಣ ಅಂದ. ಹೀಗೆ ಹತ್ತಿಪ್ಪತ್ತು ನಿಮಿಷ ನಮ್ಮ ಮಾತುಕತೆ ನಡೆದಿತ್ತು. ಬರ್ತಿದ್ದ ಆಗೊಂದು-ಹೀಗೊಂದು ಕಾರು-ಬೈಕಿಗೆ ಬುದ್ದಿವಾದ ಹೇಳಿ ಕಳಿಸ್ತಿದ್ದ ಅರುಣ್.

ಹೀಗೆ ಮಾತನಾಡ್ತಾ ಮಗಳು ಚೆನ್ನಾಗಿದ್ದಾಳ ಅಂದೆ. ಆ ಖಾಕಿಯ ಕಣ್ಣಲ್ಲಿ ನೀರು ಬರಲಿಲ್ಲ. ಮಾತಿನಲ್ಲಿ ಗಾಂಭೀರ್ಯತೆ ಇತ್ತು. ಮಾತಿನ ಧ್ವನಿಯಲ್ಲಿ ಕಣ್ಣೀರು ಹೊರಬರ್ತಿತ್ತು. ಏನ್ ಮಾಡೋದು ರಾಘಣ್ಣ, ಗಂಡ-ಹೆಂಡ್ತಿ ಇಬ್ಬರು ಮಗಳು ಮಲಗಿದ ಮೇಲೆ ಮನೆಗೆ ಹೋಗ್ತೀವಿ. ಅವಳು ಏಳುವ ಮುನ್ನವೇ ಮನೆ ಬಿಡ್ತೀವಿ ಅಂದ. ಅಲ್ಲಿವರೆಗೂ ಅವನ ಹೆಂಡತಿ ನರ್ಸ್ ಎಂದು ನನಗೆ ತಿಳಿದಿರಲಿಲ್ಲ. ಬೇಗ ಮನೆಗೆ ಹೋದ್ರೆ ಮಗಳು ಅಪ್ಪ… ಅಪ್ಪ…. ಅಂತ ಮೈಮೇಲೆ ಬೀಳ್ತಾಳೆ. ತಬ್ಬಿ ಮುದ್ದಾಡುವ ಆಸೆ. ಆದ್ರೆ, ನೂರಾರು ಜನರ ಮಧ್ಯೆ ಇರ್ತೀವಿ. ನೂರಾರು ಗಾಡಿಗಳನ್ನ ಚೆಕ್ ಮಾಡಿರ್ತೀವಿ. ನಮಗೂ ಜೀವ ಭಯವಿದೆ. ಕೊರೋನಾದ ಆತಂಕ, ಹತ್ತಿರ ಬರೋ ಐದು ವರ್ಷದ ಕಂದನನ್ನ ಗದರಿಸಿ ಅಜ್ಜಿ ಬಳಿ ಕಳಿಸುತ್ತೇನೆ. ಅವರಮ್ಮನ ಬಳಿ ಬಿಡೋಣ ಅಂದ್ರೆ. ಆಕೆ ಕೂಡ ನರ್ಸ್. ನೂರಾರು ಜನರನ್ನ ಪರೀಕ್ಷಿಸಿರ್ತಾಳೆ. ಮನೆಗೆ ಹೋದ ತಕ್ಷಣ ಮಗಳ ಮುಖ ಮುಟ್ಟಲಾಗದೆ ಕಣ್ಣೀರಿಡ್ತಾಳೆ ಎಂದು ಗೋಳಿಟ್ಟ. ಮಗಳನ್ನ ತಬ್ಬಿ ಮುದ್ದಾಡಿ ತಿಂಗಳೇ ಕಳೆದಿದೆ ಎಂದ. ಮನಸ್ಸೋ ಯಾಕೋ ಕಸಿವಿಸಿಯಾಯ್ತು.

15 ದಿನದಿಂದ ಮಗುವನ್ನ ಮುಟ್ಟದೆ ಮಲಗಿರೋ ಮಗುವಿನ ಮುಖ ನೋಡಿ ಕಾಲ ಕಳೆಯುತ್ತಿದ್ದೇವೆ. ದಿನ ಮನೆಯಿಂದ ಬರುವಾಗ ಅತ್ತೆಗೆ (ಮಗುವಿನ ಅಜ್ಜಿ) ನಮಗೆ ಏನಾದ್ರು ಆದ್ರೆ ಮಗುವಿಗೆ ನೀವೆ ಎಲ್ಲಾ ಎಂದು ಹೇಳಿ ಬರ್ತೀವಿ. ಮಗು ಹತ್ತಿರ ಬಂದಾಗ ನಾವು ಗದರುವ ರೀತಿ ನೋಡಿ, ಅಜ್ಜಿಯ ಬಳಿ ಹೋಗಿ ಕಣ್ಣೀರಾಕುತ್ತೆ. ನನ್ನ ಮಗಳು ಏನ್ ಪಾಪ ಮಾಡಿದ್ದಾಳೆ, ನಾವೇ ಹೀಗೆ ಮಾಡಿದ್ರೆ ಆ ಎಳೆ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂದು ಅನ್ನಿಸುತ್ತೆ. ಆದ್ರೆ, ನಮಗೂ ಭಯ, ಆತಂಕ. ಎಷ್ಟೋ ದಿನ ಗಂಡ-ಹೆಂಡತಿ ಇಬ್ಬರೂ ಕಣ್ಣೀರಿಟ್ಟಿದ್ದೇವೆ ಎಂದ. ಆಗ ನನಗೆ ಅನ್ನಿಸಿದ್ದು ನಿಜಕ್ಕೂ ಇವತ್ತು ಭೂಮಿಯ ಮೇಲೆ ದೇವರಿದ್ದಾರೆ ಅಂದ್ರೆ ಅದು ಪೊಲೀಸ್, ನರ್ಸ್ ಹಾಗೂ ವೈದ್ಯರು ಅಂತ. ದೂರದಲ್ಲಿ ಪೊಲೀಸ್ ಕಂಡರೆ, ಇದ್ದಾರಲ್ಲೋ ಮಾವಂದ್ರು ಅನ್ನೋರೆ ಜಾಸ್ತಿ. ಆಸ್ಪತ್ರೆಯಲ್ಲಿ ಬಿಳಿ ಡ್ರೆಸ್ ಹಾಕಿರೋ ಸಿಸ್ಟರ್ಸ್ ಗಳನ್ನ ನೋಡಿ ಚೆನ್ನಾಗಿದ್ದಾಳೆ ಅಲ್ವಾ ಅನ್ನೋ ಜನವೇ ಹೆಚ್ಚು. ಅವರ ಸೇವೆ ಯಾರಿಗೂ ಅರ್ಥವಾಗಲ್ಲ. ಆ ಸೇವೆಯ ಸಾರ್ಥಕತೆಯ ಅರಿವೇ ಇರಲ್ಲ ಅನ್ನುಸ್ತು.

ಇದು ನಮ್ಮ ಕಣ್ಣೆದುರಿಗಿರೋ ಸಾಕ್ಷಿ. ಹೆತ್ತ ಮಗುವನ್ನೇ ತಬ್ಬಿ-ಮುದ್ದಾಡಲಾಗದ ವಿಷಮ ಸ್ಥಿತಿಯಂತದ್ದು. ಹೆತ್ತ ಹಸುಗೂಸನ್ನೂ ಮುಟ್ಟಲಾಗದೆ ಮತ್ತೊಬ್ಬರ ಜೀವ ಉಳಿಸಲು ಹೋರಾಡ್ತಿರೋರ ಇಂತಹಾ ಪೊಲೀಸ್-ದಾದಿಯರ ಕರುಣಾಜನಕ ಕಥೆಗಳು ಇನ್ನು ಎಷ್ಟಿವೆಯೋ ಅನ್ನಿಸಿತು. ತಕ್ಷಣ ನನಗೆ ನೆನಪಾಗಿದ್ದು, ಮೊನ್ನೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನರ್ಸ್ ಒಬ್ಬರಿಗೆ ಫೋನ್ ಮಾಡಿ ಧನ್ಯವಾದ ಹೇಳಿ ಸಂತೈಸಿದ ಘಟನೆ. ನಿಜಕ್ಕೂ ಇವತ್ತು ಪ್ರತಿಯೊಬ್ಬ ಡಾಕ್ಟರ್, ನರ್ಸ್, ಪೊಲೀಸ್ಗಳಲ್ಲೂ ಒಂದೊಂದು ಕಣ್ಣೀರ ಕಥೆ ಇದೆ. ಕೇವಲ ಇವರಷ್ಟೆ ಅಲ್ಲ. ತಮ್ಮ ಜೀವದ ಹಂಗು ತೊರೆದು, ಮತ್ತೊಬ್ಬರ ಜೀವ ಉಳಿಸಲು ಹೋರಾಡ್ತಿರೋ ಪ್ರತಿಯೊಬ್ಬ ಹೆಲ್ತ್ ವಾರಿಯರ್ಸ್ಗಳದ್ದು ಇದೇ ಅನ್ನಿಸ್ತು. ಇವತ್ತು ಕೊರೋನ ಸೋಂಕಿತರನ್ನ ಪರೀಕ್ಷಿಸ್ತಿರೋ ಡಾಕ್ಟರ್, ಸರ್ಸ್ಗಳಿಗೆ ಕೊರೋನ ಬಂದು ಸಾಯ್ತಿದ್ದಾರೆ. ಒಂದು ಕ್ಷಣ ಜೀವವನ್ನ ಪಣಕ್ಕಿಟ್ಟು ದುಡಿಯೋದು ಬೇಕಾ ಅನ್ನಿಸ್ತಾದರು, ಆ ಸೇವೆಯ ಹಿಂದಿನ ಸಾರ್ಥಕತೆ ದೈವಸ್ವರೂಪಿ ಅಲ್ಲದೆ ಮತ್ತೇನೂ ಅಲ್ಲ ಅನ್ನಿಸಿತು.

ನನಗೆ ಅರುಣನಿಗಿಂತ ಅವನ ಪತ್ನಿಯ ಮೇಲಿನ ಅಭಿಮಾನ ಹೆಚ್ಚಾಯ್ತು. ಯಾಕಂದ್ರೆ, ತಾನೇ ಹೆತ್ತು-ಹೊತ್ತು ಸಾಕಿದ ಕಂದನನ್ನ ಆ ತಾಯಿ ಹೃದಯವೇ ಮುಟ್ಟದೆ, ಮುದ್ದಾಡದೆ ಬದುಕುತ್ತಿದ್ದಾಳೆ ಅಂದ್ರೆ ಆ ಹುದ್ದೆ ಮಾಡುವ ಎಲ್ಲರೂ ಕೊರೋನ ಸೋಂಕಿತರಿಗೆ ದೈವವೇ ಸರಿ. ಮಗಳು ಮಲಗಿದೆ ಮೇಲೆ ಮನೆಗೆ ಹೋಗಿ, ಏಳುವ ಮುನ್ನವೇ ಮನೆಯಿಂದ ಬರೋ ಇವರ ವೃತ್ತಿ ಧರ್ಮಕ್ಕೆ ನಾವು-ನೀವೆಲ್ಲರೂ ಹ್ಯಾಟ್ಸಾಫ್ ಹೇಳ್ಬೇಕು. ಹೀಗೆ ಮಾತನಾಡುತ್ತಾ ಅರುಣ್ ತನ್ನ ಕಥೆ ಹೇಳ್ದ. ಆ ಸೇವೆಯ ಬದುಕಿಗೆ ನಾವು ಧೈರ್ಯ ಹೇಳಲಷ್ಟೆ ಶಕ್ತರು. ಅವನಿಗೆ ಧೈರ್ಯ ಹೇಳಿದೆ. ಈ ಕೊರೋನಾಗೆ ಇಡೀ ಜಗತ್ತೆ ಕಂಗಾಲಾಗಿದೆ. ಸ್ವಲ್ಪ ದಿನ ಎಲ್ಲವನ್ನೂ ಸಹಿಸಿಕೊಳ್ಳಬೇಕು ಎಂದು ಸಮಾಧಾನ ಮಾಡಿದೆ. ನಮ್ಮ ಕೈನಲ್ಲಿ ಅಷ್ಟೆ ಮಾಡಲು ಸಾಧ್ಯ. ಆದರೆ, ಇವತ್ತು ಈ ದೇಶ ನಿಂತಿರೋದು ಪೊಲೀಸರು, ವೈದ್ಯರು, ನರ್ಸ್ ಗಳು, ಸೈನಿಕರು ಹಾಗೂ ರೈತರಿಂದಷ್ಟೆ ಅನ್ನೋದು ಸಾಬೀತಾಯ್ತು. ಅಂತಹಾ ಈ ಎಲ್ಲಾ ನೈಜವಾದ, ನಿಸ್ವಾರ್ಥ ಸಮಾಜ ಸೇವಕರಿಗೆ ನನ್ನ ವೈಯಕ್ತಿಕವಾಗಿ ಹಾಗೂ ನಮ್ಮ ಫಸ್ಟ್ ಸುದ್ದಿ ತಂಡದ ಪರವಾಗಿ ತುಂಬು ಹೃದಯಗಳ ಧನ್ಯವಾದ ಅರ್ಪಿಸುತ್ತೇನೆ.