ರಾಜ್ಯದಲ್ಲಿ ಲಾಕ್‍ಡೌನ್ ಮತ್ತಷ್ಟು ಬಿಗಿಗೊಳಿಸಲಾಗುವುದು : ಬಿ.ಎಸ್. ಯಡಿಯೂರಪ್ಪ.

152
firstsuddi

ಬೆಂಗಳೂರು : ಕೇಂದ್ರ ಸರ್ಕಾರ ಹೊರಡಿಸಲಿರುವ ವಿಸ್ತೃತ ಲಾಕ್‍ಡೌನ್ ಮಾರ್ಗಸೂಚಿಯನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಹೊರಡಿಸಲಾಗಿದ್ದ 21 ದಿನಗಳ ಲಾಕ್‍ಡೌನ್ ಇಂದಿಗೆ ಮುಕ್ತಾಯವಾಗಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿ ಲಾಕ್‍ಡೌನ್ ಆದೇಶವನ್ನು ಮೇ 3ರ ರವರೆಗೆ ವಿಸ್ತರಣೆ ಮಾಡಿದ್ದು, ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿ.ಎಸ್ ಯಡಿಯೂರಪ್ಪ ಅವರು, ಕೋವಿಡ್-19 ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ 21ದಿನಗಳ ಲಾಕ್‍ಡೌನ್ ಅನ್ನು ಮೇ 3ರ ವರೆಗೆ ವಿಸ್ತರಿಸಿದ ಪ್ರಧಾನಿ ಮೋದಿ ಅವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ.ಏಪ್ರಿಲ್ 20ರ ತನಕ ಹಾಟ್ ಸ್ಪಾಟ್ ಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕೇಂದ್ರ ಮಾರ್ಗಸೂಚಿ ಬಂದ ಬಳಿಕ ರಾಜ್ಯ ಸರ್ಕಾರ ಮತ್ತಷ್ಟು ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಈ ನಿರ್ಧಾರಕ್ಕೆ ಜನ ಸಹಕರಿಸಬೇಕು ಎಂದು ಹೇಳಿದರು. ರಾಜ್ಯದಲ್ಲಿ ಈವರೆಗೆ 57,633 ವಾಹನಗಳನ್ನು ಸೀಜ್ ಮಾಡಲಾಗಿದ್ದು, 2181 ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಮದ್ಯದಂಗಡಿ, ಸರ್ಕಾರಿ ಕಚೇರಿ ಒಪನ್ ಬಗ್ಗೆ ಮಾರ್ಗಸೂಚಿ ಬಂದ ಮೇಲೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ತಮ್ಮ ಭಾಷಣದಲ್ಲಿ ನೀಡಿದ 7 ಹಂತಗಳನ್ನು ಅನುಸರಿಸಲು ರಾಜ್ಯದ ಜನರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ವಿಷೇಶವಾಗಿ ಮನೆಯಲ್ಲಿ ಇರುವ ಹಿರಿಯರ ಮೇಲೆ ಹೆಚ್ಚಿನ ಗಮನಹರಿಸಬೇಕು. ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಿ. ಪೊಲೀಸ್, ಆರೋಗ್ಯ ವೃತ್ತಿಪರರು ಹಾಗೂ ನಗರ ಕಾರ್ಮಿಕರನ್ನು ಗೌರವಿಸಿ ಎಂದು ಮನವಿ ಮಾಡಿಕೊಂಡರು.