ಚಿಕ್ಕಮಗಳೂರು : ಅಸಮಾನತೆ ವಿರುದ್ಧ ಮತ್ತು ಮಹಿಳೆಯರ ಹಕ್ಕಿಗಾಗಿ ಬದುಕಿನುದ್ದಕ್ಕೂ ಹೋರಾಟ ನಡೆಸಿದ ಮಹಾನ್ ಶಕ್ತಿ ಡಾ| ಬಿ.ಆರ್.ಅಂಬೇಡ್ಕರ್ : ಬಿ.ಬಿ.ನಿಂಗಯ್ಯ.

336
firstsuddi

ಚಿಕ್ಕಮಗಳೂರು : ಅಸಮಾನತೆ ವಿರುದ್ಧ ಮತ್ತು ಮಹಿಳೆಯರ ಹಕ್ಕಿಗಾಗಿ ಬದುಕಿನುದ್ದಕ್ಕೂ ಹೋರಾಟ ನಡೆಸಿದ ಮಹಾನ್ ಶಕ್ತಿ ಡಾ| ಬಿ.ಆರ್.ಅಂಬೇಡ್ಕರ್ ಎಂದು ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಹೇಳಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
ಡಾ| ಬಿ.ಆರ್.ಅಂಬೇಡ್ಕರ್ ವಿಶ್ವದ ಮಹಾನ್ ನಾಯಕರಾಗಿದ್ದರು. ಜ್ಞಾನದ ಪರ್ವತವಾಗಿದ್ದರು. ಅವರು ಭಾರತದಲ್ಲಿ ಜನಿಸಿದ್ದು ನಮ್ಮ ಪುಣ್ಯ ಎಂದರು.
ಅಂಬೇಡ್ಕರ್ ಅವರು ಅನೇಕ ನೋವು ಸಂಕಟ ಮತ್ತು ಅಪಮಾನವನ್ನು ಎದುರಿಸಿ ತಮ್ಮ ಜೀವನ ಪರ್ಯಂತ ಸರ್ವರಿಗೂ ಸಮಪಾಲು-ಸಮಬಾಳು ಕೊಡಿಸಲು ಹೋರಾಟ ನಡೆಸಿದರು ಎಂದು ತಿಳಿಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ಅಂಬೇಡ್ಕರ್ ಅವರ ಹೋರಾಟ ಮತ್ತು ಸಂವಿಧಾನದಿಂದಾಗಿ ಇಂದು ಕೆಳ ವರ್ಗಗಳ ಜನ ತುಸು ನೆಮ್ಮದಿ ಮತ್ತು ಮರ್ಯಾದೆಯಿಂದ ಬದುಕಲು ಸಾಧ್ಯವಾಗಿದೆ ಎಂದು ಹೇಳಿದರು.
ಲಾಕ್‍ಡೌನ್ ನಿರ್ಬಂಧ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಹೊರತುಪಡಿಸಿ ಪಕ್ಷದ ಪದಾಧಿಕಾರಿಗಳು ಸಮಾರಂಭವನ್ನು ಸರಳವಾಗಿ ಆಚರಿಸಿದರು.
ಪಕ್ಷದ ಮುಖಂಡರಾದ ಎಂ.ಡಿ.ರಮೇಶ್, ಜಿ.ಎಸ್.ಚಂದ್ರಪ್ಪ, ಮೂರ್ತಿ, ಜಂಯತಿ, ಜಮೀಲ್ ಅಹಮದ್, ಇರ್ಶಾದ್, ಮುಸ್ತಾಕ್, ಗೋಪಿ ಹಾಜರಿದ್ದರು.