ಅಪಘಾತದಲ್ಲಿ ಮೃತಪಟ್ಟ ತಾಯಿಯ ಶವವನ್ನು ಸ್ವಗ್ರಾಮಕ್ಕೆ ತರಲು ಜಿಲ್ಲಾಡಳಿತ ನಿರಾಕರಣೆ-ಅಧಿಕಾರಿಗಳ ಮುಂದೆ ಗಳಗಳನೆ ಅತ್ತ ಮಗ…

198
firstsuddi

ಯಾದಗಿರಿ : ಅಪಘಾತದಲ್ಲಿ ಮೃತಪಟ್ಟ ತಾಯಿಯ ಶವವನ್ನು ಸ್ವಗ್ರಾಮಕ್ಕೆ ತರಲು ಅನುಮತಿ ಸಿಗದ ಕಾರಣ ಮಗನೋರ್ವ ಅಪರ ಜಿಲ್ಲಾಧಿಕಾರಿಗಳ ಮುಂದೆ ಗಳಗಳನೆ ಅತ್ತಿದ್ದಾರೆ. ಜಿಲ್ಲೆಯ ಬಾಡಿಹಾಳ ಗ್ರಾಮದ ನಿವಾಸಿಯಾದ ರುದ್ರಮ್ಮ ಅವರು ದೇಶಾದ್ಯಂತ ಲಾಕ್‍ಡೌನ್ ಆಗುವುದಕ್ಕೂ ಮೊದಲು ಬಳ್ಳಾರಿಯಲ್ಲಿ ಇರುವ ತಮ್ಮ ತವರು ಮನೆಗೆ ತೆರಳಿದ್ದರು. ಬಳಿಕ ಸರ್ಕಾರ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಆದೇಶ ಹೊರಡಿಸಿತ್ತು. ಹೀಗಾಗಿ ತಾಯಿ ಬಳ್ಳಾರಿಯಲ್ಲೇ ಉಳಿದುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಆದರೆ ರುದ್ರಮ್ಮ ಅವರು ನಿನ್ನೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ತಾಯಿಯ ಸಾವಿನ ಸುದ್ದಿ ತಿಳಿದ ವಿಕಲ ಚೇತನ ಮಗ ಮಲ್ಲಿಕಾರ್ಜುನ ಎಂಬುವವರು ತಾಯಿಯ ಶವವನ್ನು ಅಂತ್ಯಸಂಸ್ಕಾರಕ್ಕಾಗಿ ಸ್ವಗ್ರಾಮಕ್ಕೆ ತರಲು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಆದರೆ ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ, ಶವವನ್ನು ಸ್ವಗ್ರಾಮಕ್ಕೆ ತರಲು ಅನುಮತಿ ನೀಡಿಲ್ಲ. ಹೀಗಾಗಿ ಅನುಮತಿ ನೀಡುವಂತೆ ಒತ್ತಾಯಿಸಿ ಪುತ್ರ ಮಲ್ಲಿಕಾರ್ಜುನ್ ಅವರು ಅಪರ ಜಿಲ್ಲಾಧಿಕಾರಿಗಳ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಎಲ್ಲರ ಮನಕಲಕುವಂತಿದೆ.