ಚಿಕ್ಕಮಗಳೂರು : ಕೊರೊನಾ ವಾರಿಯರ್ಸ್‍ಗಳ ಮೇಲೆ ಹಲ್ಲೆ ಮಾಡಿದವರ ಸಂಪೂರ್ಣ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಕಿಡಿಕಾರಿದ್ದಾರೆ. ನಗರದ ಜಿಲ್ಲಾಸ್ಪತ್ರೆಯಲ್ಲಿ ಹಲ್ಲೆಗೊಳಗಾದ ಪೌರ ಕಾರ್ಮಿಕರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರು ಇಂದು ಚಿಕ್ಕಮಗಳೂರು ಹೀಗೆ ಒಂದರ ಮೇಲೆ ಒಂದರಂತೆ ಕೊರೊನಾ ವಾರಿಯರ್ಸ್‍ಗಳ ಮೇಲೆ ಹಲ್ಲೆ ನಡೆಯುತ್ತಲೇ ಇದೆ. ಹಲ್ಲೆ ಮಾಡಿದವರು 5 ವರ್ಷ ಜೈಲಿನಿಂದ ಹೊರಬರದಂತೆ ಸರ್ಕಾರ ಕ್ರಮಕೈಗೊಳ್ಳಬೇಕು. ಹಲ್ಲೆ ಮಾಡಿದವರ ಸಂಪೂರ್ಣ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಶಾಸಕ ಜಮೀರ್ ಅಹಮ್ಮದ್ ಖಾನ್ ಅವರು ಕೊರೊನಾ ವೈರಸ್‍ಗೆ ತುತ್ತಾಗಿ ಮೃತಪಟ್ಟವರ ಶವ ಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ, ಕೂಡಲೇ ಅವರನ್ನು ಕ್ವಾರಂಟೈನ್‍ನಲ್ಲಿ ಇಡಬೇಕು. ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಯನ್ನು ಕೂಡಾ ಸಮರ್ಥಿಸಿಕೊಂಡಿದ್ದಾರೆ. ಅವರನ್ನು ಗೃಹಬಂಧನದಲ್ಲಿ ಇಡಬೇಕು. ಹಲ್ಲೆ ನಡೆಸಿದವರ ಮೇಲೆ ಯಾವ ಪ್ರಕರಣ ಹಾಕುತ್ತಾರೋ, ಹಲ್ಲೆಗೆ ಪ್ರಚೋದಿಸಿದವರ ಮೇಲೂ ಅದೇ ಪ್ರಕರಣ ದಾಖಲಿಸಬೇಕು. ಬೆಂಗಳೂರು, ಮಂಡ್ಯ, ಗದಗ, ಬೆಳಗಾವಿಯಲ್ಲಿ ತಬ್ಲೀಘಿಗೆ ಹೋದವರು ಇದ್ದಾರೆ. ಬೆಳಗಾವಿಯಲ್ಲಿ 70 ಮಂದಿ ತಬ್ಲೀಘಿಗೆ ಹೋಗಿ ಬಂದವರು ಸಿಕ್ಕಿದ್ದಾರೆ. ಅವರು ನಮ್ಮ ದೇಶದ ಪ್ರಜೆಗಳಂತೆ ನಡೆದುಕೊಳ್ಳುತ್ತಿಲ್ಲ. ಕೊರೊನಾವನ್ನು ಉಳಿದವರಿಗೂ ಹಬ್ಬಿಸಬೇಕು ಎನ್ನು ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ. ಇದು ಜಿಹಾದಿ, ಭಯೋತ್ಪಾದಕರ ಮುಂದುವರೆದ ಭಾಗ. ಇನ್ನು ಹಲವಾರು ಮಂದಿ ಕ್ವಾರಂಟೈನ್‍ಗೆ ಬಂದಿಲ್ಲ. ಆಸ್ಪತ್ರೆಗೂ ಹೋಗಿಲ್ಲ. ಪೊಲೀಸರಿಗೂ ಕೂಡಾ ಮಾಹಿತಿ ನೀಡಿಲ್ಲ. ಹೀಗಾಗಿ ಸರ್ಕಾರ ಜಾಗೃತವಹಿಸಿ ಅವರನ್ನೆಲ್ಲ ಕ್ವಾರಂಟೈನ್‍ನಲ್ಲಿ ಇಡಬೇಕು ಎಂದು ಆಗ್ರಹಿಸಿದರು.









