ಫಸ್ಟ್ ಸುದ್ದಿ : ಕೋವಿಡ್19 ರಾಷ್ಟ್ರೀಯ ವಿಪತ್ತು ದೇಶ ಹಿಂದೆಂದೂ ಕಂಡರಿಯದ ಸವಾಲುಗಳನ್ನು ತಂದೊಡ್ಡಿದೆ. ದೇಶ ಲಾಕ್ ಡೌನ್ ಆದಾಗಿನಿಂದ ಆರೋಗ್ಯ ತುರ್ತು ಪರಿಸ್ಥಿತಿ ಯೊಂದಿಗೆ ಬೃಹತ್ ಪ್ರಮಾಣದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ರಾಜ್ಯಾದ್ಯಂತ ತಮ್ಮ ಭವಿಷ್ಯದ ಅತಿಮುಖ್ಯ ಘಟ್ಟವಾದ SSLC ಪರೀಕ್ಷೆಯನ್ನು ಎದುರಿಸಲು ಸನ್ನದ್ಧರಾಗಿದ್ದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಮುಂದೂಡಿದ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಆದಾಗ ತುಸು ಆತಂಕಗೊಂಡಿದ್ದರು. ಆದರೆ ದಿನಕಳೆದಂತೆಲ್ಲ ದೇಶದಲ್ಲಿ ಹೆಚ್ಚುತ್ತಾ ಹೋದ ಕೊರೊನಾ ಸೋಂಕಿನಿಂದಾಗಿ ಸದ್ಯಕ್ಕಂತೂ ಪರೀಕ್ಷೆಗಳು ನಡೆಯುವಂತಿಲ್ಲ. ಈಗಾಗಲೇ ಶಿಕ್ಷಣ ಇಲಾಖೆ 7,8 ಹಾಗೂ 9 ನೆ ತರಗತಿಯ ವಿದ್ಯಾರ್ಥಿಗಳನ್ನು ಹಿಂದಿನ formative assessment ಹಾಗೂ summetive assessment ಒಂದರ ಅಂಕಗಳ ಆಧಾರದ ಮೇಲೆ ತೇರ್ಗಡೆಗೊಳಿಸುವ ಅಧಿಸೂಚನೆಯನ್ನು ಹೊರಡಿಸಿ ಗೊಂದಲವನ್ನು ನಿವಾರಣೆ ಮಾಡಿದೆ ಆದರೆ SSLC ಪರೀಕ್ಷಾ ವೇಳಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ ಹಾಗೂ ಪ್ರಸ್ತುತ ಸ್ಥಿತಿಯಲ್ಲಿ ಅದು ಕಷ್ಟಸಾಧ್ಯ. ಏಕೆಂದರೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಹಾಗೂ ಸಾಮಾಜಿಕ ಅಂತರದೊಂದಿಗೆ ಪರೀಕ್ಷಾ ಕೊಠಡಿಗಳ ವ್ಯವಸ್ಥೆ ಸರಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಇತ್ತ ವಿದ್ಯಾರ್ಥಿಗಳು ನಿರ್ದಿಷ್ಠ ಗುರಿ ಇಲ್ಲದೆ ಪ್ರತಿದಿನ ಪೋಷಕರ ಒತ್ತಾಯಕ್ಕೆ ಓದಿದ ಶಾಸ್ತ್ರ ಮುಗಿಸಿ ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದಾರೆ. ವಿಷಯವಾರು ಶಿಕ್ಷಕರು ಕೂಡ ಪ್ರತಿದಿನ ಮಕ್ಕೊಳೊಂದಿಗೆ ಫೋನ್ ಮುಖಾಂತರ ವಿಷಯಗಳ ಪುನಾರವಾರ್ತನೆ ಮಾಡುತ್ತಾ ಅವರನ್ನು ಪರೀಕ್ಷೆ ತಯಾರಿ ಮಾಡುತ್ತಿದ್ದಾರೆ. ಒಟ್ಟಾರೆ ಲಾಕ್ ಡೌನ್ ನಿಂದಾಗಿ ಈ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪಿದೆ. ಹಿಂದೆಲ್ಲಾ ಈ ಹೊತ್ತಿಗಾಗಲೇ ಕಾಲೇಜ್ ಅಡ್ಮಿಷನ್ ಬೇಟೆಯಲ್ಲಿರುತ್ತಿದ್ದ ಪೋಷಕರು ಇನ್ನೂ ನಡೆಯಲಿರುವ ಪರೀಕ್ಷೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ನಮ್ಮ ಮುಂದಿರುವ ಸಮಸ್ಯೆಗೆ ಪರಿಹಾರ ಸುಲಭವಲ್ಲ.ಜನರು ಸಾಮಾಜಿಕ ಜವಾಬ್ದಾರಿ ಅರಿತು ಸರ್ಕಾರದ ಜೊತೆಗೆ ಕೈಜೋಡಿಸಿ ಲಾಕ್ ಡೌನ್ ಅನ್ನು ಸಫಲವಾಗಿಸಿದರೆ ಮಾತ್ರ SSLC ಮಕ್ಕಳ ಭವಿಷ್ಯದೊಂದಿಗೆ ನಮ್ಮ ಮುಂದಿರುವ ಎಲ್ಲ ಸಮಸ್ಯೆ ಗಳಿಗೆ ಪರಿಹಾರ ಸಾಧ್ಯ.










