ಮೂಡಿಗೆರೆ : ಹೆಸಗಲ್ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಹಳ್ಳಿಬೈಲು ರಸ್ತೆಯಲ್ಲಿ ಕಾಫಿ ತೋಟದ ಬೇಲಿ ಹಾಗೂ ಚರಂಡಿ ತ್ಯಾಜ್ಯವನ್ನು ರಸ್ತೆ ಮೇಲೆ ಹಾಕಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ತಿರುಗಾಡಲು ಕಷ್ಟವಾಗಿದೆ ಎಂದು ಬಿಳಗುಳದ ವಿವೇಕಾನಂದ ನಗರ ಹಾಗೂ ಹಳ್ಳಿಬೈಲು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಬಿಳಗುಳದ ಕೆ.ಎಂ ರಸ್ತೆಯಿಂದ ವಿವೇಕಾನಂದನಗರ ಹಾಗೂ ಹಳ್ಳಿಬೈಲು ಗ್ರಾಮಕ್ಕೆ ತೆರಳಲು ಉತ್ತಮ ರಸ್ತೆ ಇಲ್ಲದ ಕಾರಣ ಕೆಲವು ವರ್ಷಗಳ ಹಿಂದೆ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿಸಲಾಗಿತ್ತು. ಸಹಜವಾಗಿ ಕಾಂಕ್ರಿಟ್ ರಸ್ತೆಯ ಅಕ್ಕಪಕ್ಕ ಅಂಚುಗಳು ಕಂಡುಬರುತ್ತವೆ. ರಸ್ತೆಯ ಇಕ್ಕೆಲಗಳಿಗೆ ಮಣ್ಣು ತುಂಬಿಸಿ ಸರಾಗವಾದ ಸಂಚಾರಕ್ಕೆ ಅನುವು ಮಾಡಿಕೊಡದಿರುವ ಗ್ರಾಮ ಪಂಚಾಯಿತಿಯ ನಿರಾಸಕ್ತಿಯನ್ನು ಬಂಡವಾಳವನ್ನಾಗಿರಿಸಿಕೊಂಡ ರಸ್ತೆಯ ಪಕ್ಕದ ಕಾಫಿ ತೋಟದ ಮಾಲಿಕರುಗಳು ತಮ್ಮ ತೋಟಕ್ಕೆ ಹೊಂದಿಕೊಂಡಂತಿರುವ ಚರಂಡಿ ಹಾಗೂ ಬೇಲಿಯನ್ನು ಶುಚಿಗೊಳಿಸುವಾಗ ಬಂದ ತ್ಯಾಜ್ಯವನ್ನು ರಸ್ತೆಗಳ ಇಕ್ಕೆಲಗಳಿಗೆ ಸುರಿಯುತ್ತಿದ್ದಾರೆ. ಈ ತ್ಯಾಜ್ಯದಲ್ಲಿ ಹಲವು ಗಾಜಿನ ಚೂರುಗಳು, ಕಬ್ಬಿಣದ ಮೊಳೆಗಳು ಸೇರಿದಂತೆ ಹಲವು ಅಪಾಯಕಾರಿ ವಸ್ತುಗಳು ಪಾದಾಚಾರಿಗಳ ಕಾಲಿಗೆ ಚುಚ್ಚಿ ಆರೋಗ್ಯ ಹದಗೆಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಪಾದಾಚಾರಿಗಳಿಗಷ್ಟೇ ಅಲ್ಲದೆ ವಾಹನ ಸವಾರರಿಗೆ ಕೂಡ ಸಮಸ್ಯೆಯಾಗುತ್ತಿದ್ದು, ರಸ್ತೆ ಮೇಲೆ ಬಿದ್ದಿರುವ ಚರಂಡಿ ಹಾಗೂ ಬೇಲಿಯ ತ್ರ್ಯಾಜ್ಯವನ್ನು ಕೂಡಲೇ ಖಾಲಿ ಮಾಡಿಸಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.










