ಮೂಡಿಗೆರೆ : ಕಳೆದ ವರ್ಷ ಸುರಿದ ರಣಭೀಕರ ಮಳೆಯಿಂದಾಗಿ ಹಾಳಾಗಿದ್ದ ತಾಲ್ಲೂಕಿನ ಮುಗ್ರಹಳ್ಳಿ ಸೇತುವೆಯ ನೂತನ ಕಾಮಗಾರಿಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ವರ್ಷದ ಅತೀವೃಷ್ಟಿಯಿಂದಾಗಿ ತಾಲ್ಲೂಕಿನಾದ್ಯಂತ ಹಲವೆಡೆ ಭೂ ಕುಸಿತ, ಸೇತುವೆಗಳು ಕೊಚ್ಚಿಕೊಂಡು ಹೋಗಿ ಜನಜೀವನ ಅಸ್ಥವ್ಯಸ್ಥವಾಗಿತ್ತು. ಇದೇ ಸಂದರ್ಭದಲ್ಲಿ ಮುಗ್ರಹಳ್ಳಿ, ಮಾಳಿಗನಾಡು ಮತ್ತು ಬಂಕೇನಹಳ್ಳಿ ಸೇತುವೆಗಳು ಸಂಪೂರ್ಣವಾಗಿ ಕುಸಿಯುವ ಹಂತಕ್ಕೆ ತಲುಪಿದ್ದು ಜನರು ಆತಂಕದಿಂದ ಓಡಾಟ ನಡೆಸುವ ಪರಿಸ್ಥಿತಿ ತಲೆದೋರಿತ್ತು. 1.37 ಕೋಟಿ ರೂ ವೆಚ್ಚದಲ್ಲಿ ಮಾಳಿಗನಾಡು ಸೇತುವೆ, 2 ಕೋಟಿ ವೆಚ್ಚದಲ್ಲಿ ಮುಗ್ರಹಳ್ಳಿ ಸೇತುವೆಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕಾಮಗಾರಿ ಆರಂಭವಾಗಲಿದೆ. ಇದರ ಜೊತೆಗೆ 3 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುವ ಬಂಕೇನಹಳ್ಳಿ ಸೇತುವೆ ಕಾಮಗಾರಿಗೆ ಒಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಆದಷ್ಟು ಬೇಗ ಕೆಲಸ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ನಂತರ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಮಗಾರಿ ಸಾಧ್ಯವಾಷ್ಟು ಬೇಗನೆ ಪೂರ್ಣಗೊಳ್ಳುವಂತೆ ನೊಡಿಕೊಳ್ಳಬೇಕು. ಸಧ್ಯದಲ್ಲಿಯೇ ಮಳೆಗಾಲ ಪ್ರಾರಂಭವಾಗುವುದರಿಂದ ಕೆಲಸಕ್ಕೆ ಹಿನ್ನಡೆಯುಂಟಾಗಬಹುದು, ದೂರಾಲೋಚನೆಯಿಂದ ಕೆಲಸ ಮುಗಿಸಿ ಎಂದು ಗುತ್ತಿಗೆದಾರರಿಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡ ಹಳಸೆ ಶಿವಣ್ಣ, ಭರತ್ ಸೇರಿದಂತೆ ಮುಗ್ರಹಳ್ಳಿ ಗ್ರಾಮಸ್ಥರು ಹಾಜರಿದ್ದರು.










