ಚಿಕ್ಕಮಗಳೂರು : ಆರನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೊಳಿಸುವಂತೆ ಶಿಕ್ಷಣ ಇಲಾಖೆ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಕಳುಹಿಸಿರುವ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಜಿಲ್ಲಾ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಸಚಿವ ಸಿ.ಟಿ.ರವಿ ಅವರನ್ನು ಇತ್ತೀಚೆಗೆ ನಗರದ ಅವರ ಗೃಹ ಕಛೇರಿಯಲ್ಲಿ ಭೇಟಿ ಮಾಡಿದ ಒಕ್ಕೂಟದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಖಾಸಗಿ ಅನುದಾನ ರಹಿತ ಶಾಲೆಗಳು ಈಗಾಗಲೇ ಅತಿ ಕಡಿಮೆ ಶುಲ್ಕ ಪಡೆದು ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿವೆ, ಪ್ರತಿವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುತ್ತಿವೆ ಎಂದು ಹೇಳಿದರು.
ಖಾಸಗಿ ಅನುದಾನ ರಹಿತ ಶಾಲೆಗಳು ವಿದ್ಯಾರ್ಥಿಗಳಿಂದ ಕಡಿಮೆ ಶುಲ್ಕ ಪಡೆಯುತ್ತಿರುವುದರಿಂದಾಗಿ 6ನೇ ವೇತನ ಆಯೋಗದ ಶಿಫಾರಸ್ಸನ್ನು ಪಾಲಿಸಲು ಸಾಧ್ಯವಾಗುವುದಿಲ್ಲ, ಒಂದು ವೇಳೆ ಶಿಫಾರಸ್ಸನ್ನು ಜಾರಿಗೊಳಿಸಿದರೆ ವಿದ್ಯಾರ್ಥಿಗಳಿಂದ ಶಾಲೆಗಳು ಹೆಚ್ಚಿನ ಶುಲ್ಕ ಪಡೆಯಬೇಕಾಗುತ್ತದೆ, ಇಲ್ಲದಿದ್ದಲ್ಲಿ ಈಗಾಗಲೇ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಶಾಲೆಗಳು ಆರ್ಥಿಕವಾಗಿ ನಷ್ಟಕ್ಕೀಡಾಗಿ ಶಾಲೆಗಳನ್ನು ಮುಚ್ಚಬೇಕಾಗುತ್ತದೆ ಎಂದು ಅಳಲು ತೋಡಿಕೊಂಡರು.
ಲಾಕ್ಡೌನ್ನಿಂದಾಗಿ ಪರೀಕ್ಷೆಗೆ ಮುಂಚೆ ಶಾಲೆಗಳನ್ನು ಸ್ಥಗಿತಗೊಳಿಸಿದ್ದರಿಂದಾಗಿ 2ನೇ ಕಂತಿನ ಶುಲ್ಕ ವಿದ್ಯಾರ್ಥಿಗಳಿಂದ ಪಾವತಿಯಾಗದೇ ಶಿಕ್ಷಕರು ಮತ್ತು ಸಿಬ್ಬಂಧಿಗಳಿಗೆ ವೇತನ ನೀಡುವುದಕ್ಕೆ ತೊಂದರೆಯಾಗಿದೆ ಎಂದ ಅವರು ಈ ಹಿನ್ನೆಲೆಯಲ್ಲಿ ಶುಲ್ಕವನ್ನು ಪಡೆಯಬಾರದು ಎಂಬ ಶಿಕ್ಷಣ ಇಲಾಖೆಯ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶುಲ್ಕವನ್ನು ರಾಜ್ಯ ಸರ್ಕಾರ ತಕ್ಷಣ ಬಿಡುಗಡೆ ಮಾಡುವ ಮೂಲಕ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಶಾಲೆಗಳ ಕೈಹಿಡಿಯಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಅಧ್ಯಕ್ಷ ಬಿ.ಹೆಚ್.ನರೇಂದ್ರ ಪೈ, ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ನಂದಕುಮಾರ್, ಸಹಕಾರ್ಯದರ್ಶಿ ಮಹಮದ್ ಗೌಸ್, ನಿರ್ದೇಶಕರಾದ ಎಂ.ಎನ್.ಷಡಕ್ಷರಿ, ಬಸವರಾಜ್, ಶ್ರೀನಿವಾಸ್, ಚೇತನ್ ಕುಮಾರ್, ಕುಳ್ಳೇಗೌಡ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಶಿಕ್ಷಣ ಇಲಾಖೆ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಕಳುಹಿಸಿರುವ ಸುತ್ತೋಲೆಯನ್ನು ಹಿಂಪಡೆಯಬೇಕೆಂದು ಸರ್ಕಾರಕ್ಕೆ...










