ಚಿಕ್ಕಮಗಳೂರು : ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು : ನೇತ್ರಾವತಿ ದೇವರಾಜ ಅರಸ್.

251
firstsuddi

ಚಿಕ್ಕಮಗಳೂರು : ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ ದೇವರಾಜ ಅರಸ್ ಸಲಹೆ ಮಾಡಿದರು.
ತಾಲ್ಲೂಕಿನ ತೇಗೂರು ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಕೇಂದ್ರ ಸರ್ಕಾರದ 14ನೇ ಹಣಕಾಸು ಯೋಜನೆಯಡಿ 2 ಲಕ್ಷ 45 ಸಾವಿರ ರೂ ವೆಚ್ಚದ ವಿವಿಧ ಸವಲತ್ತುಗಳನ್ನು 31 ವಿಶಿಷ್ಟ ಚೇತನರಿಗೆ ವಿತರಿಸಿ ಅವರು ಮಾತನಾಡಿದರು.
ಬಹಳಷ್ಟು ವರ್ಷಗಳ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸವಲತ್ತುಗಳು ಗ್ರಾಮೀಣ ಭಾಗದ ಬಡವರಿಗೆ ತಲುಪುವುದು ಕಷ್ಟವಾಗಿತ್ತು ಆದರೆ ಇತ್ತೀಚಿನ ವರ್ಷಗಳಲ್ಲಿ ಗ್ರಾಮ ಪಂಚಾಯಿತಿಗಳ ಮೂಲಕ ಅವು ಅರ್ಹರನ್ನು ತಲುಪುತ್ತಿವೆ ಎಂದರು.
ಸರ್ಕಾರದ ಸವಲತ್ತುಗಳು, ಸೌಲಭ್ಯಗಳು ಸದ್ಬಳಕೆಯಾದರೆ ಸರ್ಕಾರದ ಶ್ರಮ ಸಾರ್ಥಕವಾಗುವುದರ ಜೊತೆಗೆ ಫಲಾನುಭವಿಗಳ ಬದುಕೂ ಹಸನಾಗುತ್ತದೆ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ತೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 22 ವಿಶಿಷ್ಟ ಚೇತನರಿಗೆ ಸೋಲಾರ್ ದೀಪಗಳು, ನಾಲ್ವರಿಗೆ ಸಿಂಟೆಕ್ಸ್ ಟ್ಯಾಂಕ್‍ಗಳು ಮತ್ತು ಐವರಿಗೆ ವೈದ್ಯಕೀಯ ವೆಚ್ಚವನ್ನು ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಚಂದ್ರಮ್ಮ, ಸದಸ್ಯರಾದ ಶಾಂತಕುಮಾರ್, ಹರೀಶ್, ವಾಜೀದ್ ಅಹಮದ್, ರಂಗನಾಥ್ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಕೆ.ಆರ್.ಲಾಸ್ಯ ಉಪಸ್ಥಿತರಿದ್ದರು.