ಕೊಟ್ಟಿಗೆಹಾರ : ಲಾಕ್ಡೌನ್ ಪ್ರಾರಂಭವಾದ ದಿನದಿಂದ ಸಂತೆ ನಡೆಸಲು ಅವಕಾಶ ಇಲ್ಲದೇ ಇರುವುದರಿಂದ ವಿವಿದ ಊರಿನ ಸಂತೆಗಳಲ್ಲಿ ಅಂಗಡಿ ತೆರೆಯುತ್ತಿದ್ದ ಸಂತೆಯ ವರ್ತಕರ ಬದುಕು ಡೋಲಾಯಮಾನವಾಗಿದೆ.
ಬಣಕಲ್, ಕೆಳಗೂರು, ನಿಡುವಾಳೆ ಸೇರಿದಂತೆ ವಿವಿಧ ಊರುಗಳಲ್ಲಿ ಸಂತೆ ಹಾಕುತ್ತಿದ್ದ ವರ್ತಕರು ಕಳೆದ ಕೆಲವು ತಿಂಗಳುಗಳಿಂದ ಸಂತೆಯಲ್ಲಿ ಅಂಗಡಿ ಹಾಕಲಾಗದೇ ಸಂಕಷ್ಟದಲ್ಲಿದ್ದಾರೆ. ತರಕಾರಿ ದಿನಸಿ ಅಂಗಡಿಗಳನ್ನು ಸಂತೆಯಲ್ಲಿ ಹಾಕುತ್ತಿದ್ದ ಕೆಲ ವರ್ತಕರು ವಾಹನಗಳಲ್ಲಿ ಗ್ರಾಮ ಗ್ರಾಮಗಳಿಗೆ ತೆರಳಿ ದಿನಸಿ ತರಕಾರಿಗಳನ್ನು ಮಾರುತ್ತಿದ್ದಾರೆ. ಆದರೆ ಬಟ್ಟೆ, ಚಪ್ಪಲಿ, ತಿಂಡಿ ತಿನಿಸುಗಳು, ದಿನಬಳಕೆ ಸಾಮಾಗ್ರಿಗಳ ಅಂಗಡಿಗಳ ವರ್ತಕರು ಏನು ಮಾಡಲು ತೋಷದೇ ಕೈಚೆಲ್ಲಿ ಕುಳಿತಿದ್ದಾರೆ.
ಕೆಲ ವರ್ತಕರು ಈ ಮುಂಚೆ ಸಂತೆ ನಡಯುತ್ತಿದ್ದ ಗ್ರಾಮಗಳಲ್ಲಿ ಇರುವ ಖಾಲಿ ಅಂಗಡಿ ಮಳಿಗೆಗಳನ್ನು ವಾರಕ್ಕೆ ಒಂದು ದಿನ ಬಾಡಿಗೆಗೆ ಪಡೆದು ಅಲ್ಲಿ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿದ್ದಾರೆ. ಬಣಕಲ್ನಲ್ಲಿ ಸಂತೆಗೆ ಸಾಗುವ ಮತ್ತಿಕಟ್ಟೆ ರಸ್ತೆಯಲ್ಲಿರುವ ಖಾಲಿ ಅಂಗಡಿ ಮಳಿಗೆಯಲ್ಲಿ ಸೋಮವಾರದ ದಿನ ಅಂಗಡಿ ತೆರೆದು ಕೆಲ ಸಂತೆಯ ವರ್ತಕರು ವ್ಯಾಪಾರ ನಡೆಸುತ್ತಿದ್ದಾರೆ.
ಹೀಗೆ ಮಾಡುವುದರಿಂದ ವರ್ತಕರಿಗೆ ಬಾಡಿಗೆ, ಸಾಗಣೆ ಮುಂತಾದ ವೆಚ್ಚಗಳು ಹೆಚ್ಚಿ ವ್ಯಾಪಾರದಲ್ಲಿ ಲಾಭಾಂಶ ವೆಚ್ಚವನ್ನು ಸರಿದೂಗಿಸವುದುರಲ್ಲಿ ಕಳೆದು ಹೋಗುತ್ತಿದೆ. ಈ ಎಲ್ಲಾ ಅವ್ಯವಸ್ಥೆಗಳ ಬದಲು ಗ್ರಾ.ಪಂ ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ನಿಯಮ ರೂಪಿಸಿ ವರ್ತಕರಿಗೆ ಸಂತೆಯಲ್ಲಿ ಅಂಗಡಿ ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ವರ್ತಕರು ಒತ್ತಾಯಿಸಿದ್ದಾರೆ.
ವಿವಿಧ ಸಂತೆಗಳಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿದ್ದೇವು. ಈಗ ಸಂತೆ ಇಲ್ಲದೇ ವ್ಯಾಪಾರ ಮಾಡಲು ಸಾದ್ಯವಾಗುತ್ತಿಲ್ಲ. ಸರ್ಕಾರ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಸಂತೆ ನಡೆಸಲು ಅವಕಾಶ ಮಾಡಿಕೊಡಬೇಕು ಎನ್ನುತ್ತಾರೆ ಬಟ್ಟೆ ವ್ಯಾಪಾರಿ ಭಾಸ್ಕರ್.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಭಜರಂಗದಳ ತಾಲ್ಲೂಕು ಸಂಚಾಲಕ ವಿನಯ್ ಶೆಟ್ಟಿ ಅವರು ‘ಸಂತೆಯಲ್ಲಿ ಅಂಗಡಿ ತೆರೆಯುತ್ತಿದ್ದ ವರ್ತಕರು ಸಂತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದೆ. ಕೆಲ ವರ್ತಕರು ಖಾಲಿ ಅಂಗಡಿ ಮಳಿಗೆಯಲ್ಲಿ ವಾರದ ಒಂದು ದಿನ ಅಂಗಡಿ ತೆರೆಯುತ್ತಿದ್ದಾರೆ. ಅಲ್ಲಲ್ಲಿ ಇರುವ ಖಾಲಿ ಅಂಗಡಿ ಮಳಿಗೆಗಳಲ್ಲಿ ಅಂಗಡಿ ತೆರೆದರೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಕಷ್ಟ. ಆದ್ದರಿಂದ ಸಂತೆ ಮೈದಾನದಲ್ಲಿ ಸಂತೆ ನಡೆಸಲು ಅವಕಾಶ ನೀಡಿದರೇ ಎಲ್ಲಾ ವರ್ತಕರು ಒಂದೆಡೆ ಅಂಗಡಿ ತೆರೆಯುವುದರಿಂದ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಸುಲಭ. ಈ ಬಗ್ಗೆ ಸರ್ಕಾರ ಗಮನ ಹರಿಸಲಿ’
ಬಳಿಕ ಮಾತನಾಡಿದ ಬಣಕಲ್ ಗ್ರಾ.ಪಂ ಅಧ್ಯಕ್ಷರಾದ ಸತೀಶ್ ಮತ್ತಿಕಟ್ಟೆ ಅವರು, ‘ಈ ಸಂದರ್ಭದಲ್ಲಿ ಸಂತೆ ನಡೆಸಲು ಅವಕಾಶ ಇಲ್ಲ. ಆದರೂ ಸಾಮಾಜಿಕ ಅಂತರ ಕಾಪಾಡಿಕೊಂಡು ಸುರಕ್ಷಿತಾ ಕ್ರಮಗಳನ್ನು ಅನುಸರಿಸಿ ಸಂತೆ ನಡೆಸಲು ಅವಕಾಶ ನೀಡುವ ಬಗ್ಗೆ ತಾಲ್ಲೂಕು ಅಧಿಕಾರಿಗಳೊಡನೆ ಚರ್ಚಿಸಿತೀರ್ಮಾನ ಕೈಗೊಳ್ಳಲಾಗುವುದು ಎಂದರು.










