ಚಿಕ್ಕಮಗಳೂರು : ಜಾತಿ ವ್ಯವಸ್ಥೆ ಪ್ರಪಂಚದಲ್ಲಿ ಕಾಲದಿಂದ ಕಾಲಕ್ಕೆ ಹೊಸ ರೂಪ ಪಡೆಯುತ್ತಿದೆ : ರವೀಶ್ ಕ್ಯಾತನಬೀಡು.

255
firstsuddi

ಚಿಕ್ಕಮಗಳೂರು : ಜಾತಿ ವ್ಯವಸ್ಥೆ ಪ್ರಪಂಚದಲ್ಲಿ ಕಾಲದಿಂದ ಕಾಲಕ್ಕೆ ಹೊಸ ರೂಪ ಪಡೆಯುತ್ತಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವೀಶ್ ಕ್ಯಾತನಬೀಡು ಹೇಳಿದರು.

ನಗರದ ಅಂಬೇಡ್ಕರ್ ಶಾಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಏರ್ಪಡಿಸಿದ್ದ ಸಮಿತಿಯ ಸ್ಥಾಪಕ ಪ್ರೊ|| ಬಿ.ಕೃಷ್ಣಪ್ಪ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಶತ ಶತಮಾನಗಳಿಂದ ಜಾತಿ ವ್ಯವಸ್ಥೆ ಉಳಿದು ಬಂದಿದೆ ಅದು ಯಾವ ಕಾಲಕ್ಕೂ ಅಳಿಯುವ ಲಕ್ಷಣ ಕಂಡು ಬರುತ್ತಿಲ್ಲ, ಆಯಾ ಕಾಲಕ್ಕೆ ತಕ್ಕಂತೆ ಜಾತಿ ವ್ಯವಸ್ಥೆ ಮತ್ತು ದೌರ್ಜನ್ಯ, ಶೋಷಣೆ ಹೊಸ ರೂಪ ಪಡೆಯುತ್ತಿವೆ ಹಾಗಾಗಿ ಶೋಷಿತ ವರ್ಗ ಅತ್ಯಂತ ಎಚ್ಚರಿಕೆಯಿಂದ ಬದುಕಬೇಕು ಎಂದು ಕಿವಿಮಾತು ಹೇಳಿದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ ಪ್ರೊ|| ಬಿ.ಕೃಷ್ಣಪ್ಪನವರ ಹೋರಾಟ ಮತ್ತು ಅವರ ಇಡೀ ಜೀವನ ಶೋಷಿತ ವರ್ಗಕ್ಕೆ ಮಾರ್ಗದರ್ಶಕವಾಗಬೇಕು, ಅವರ ಹೋರಾಟದಿಂದಾಗಿ ಇಂದು ಶೋಷಿತ ವರ್ಗ ಸ್ವಲ್ಪ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಪ್ರೊ|| ಬಿ.ಕೃಷ್ಣಪ್ಪನವರು ಶೋಷಿತರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ತಿಳಿಸಿದರು.

ಸಮಿತಿಯ ಮೈಸೂರು ವಿಭಾಗೀಯ ಸಂಚಾಲಕ ಶೂದ್ರ ಶ್ರೀನಿವಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಜಿಲ್ಲಾ ಸಂಘಟನಾ ಸಂಚಾಲಕರಾದ ಡಿ.ರಾಮು, ಗಂಗರಾಜು, ಕಡೂರು ತಾಲ್ಲೂಕು ಸಂಚಾಲಕ ಕೃಷ್ಣಪ್ಪ, ಶೃಂಗೇರಿ ಕ್ಷೇತ್ರ ಸಂಚಾಲಕ ಎಸ್.ಹನುಮಂತ, ರೈತ ಸಂಘದ ಮುಖಂಡ ಗುರುಶಾಂತಪ್ಪ ಉಪಸ್ಥಿತರಿದ್ದರು.