1 ರಿಂದ 5ನೇ ತರಗತಿ ವರೆಗಿನ ಆನ್‍ಲೈನ್ ಶಿಕ್ಷಣ ರದ್ದು-ಸುರೇಶ್ ಕುಮಾರ್.

133
firstsuddi

ಬೆಂಗಳೂರು : ಜೂನ್.25 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಆರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ನಮ್ಮ ಜವಾಬ್ದಾರಿ ಎಂದು ಪ್ರಾಥಾಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಆನ್‍ಲೈನ್ ಶಿಕ್ಷಣ ನಡೆಯಬೇಕಾ..? ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದತಿ ಕುರಿತು ಅಧಿಕಾರಿಗಳು ಹಾಗೂ ತಜ್ಞರ ಬಳಿ ಮಹತ್ವದ ಸಭೆ ನಡೆಸಿ ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಿಗಧಿಯಾದಂತೆ ಜೂನ್. 25ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆಯುತ್ತವೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಠಿಯಿಂದ ಪರೀಕ್ಷೆ ನಡೆಸುವುದು ನಮ್ಮ ಜವಾಬ್ದಾರಿ. ಮಕ್ಕಳ ಸುರಕ್ಷತೆಗೆ ಅತ್ಯಂತ ಹೆಚ್ಚಿ ಆಧ್ಯತೆ ನೀಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿದ್ದೇನೆ. ನಮ್ಮೊಂದಿಗೆ ಆರೋಗ್ಯ ಹಾಗೂ ಪೊಲೀಸ್ ಇಲಾಖೆಗಳು ಕೈಜೋಡಿಸುತ್ತಿದೆ. ಎಲ್ಲಾ ಶಾಸಕರ ಸಹಕಾರ ಪಡೆದು ಪರೀಕ್ಷೆಯನ್ನು ನಡೆಸುತ್ತಿದ್ದೇವೆ. ಪ್ರತಿ ವಿದ್ಯಾರ್ಥಿಗಳು 2-3 ಮಾಸ್ಕ್‍ಗಳನ್ನು ನೀಡುತ್ತೇವೆ. ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವ ಮುನ್ನ ವಿದ್ಯಾರ್ಥಿಯನ್ನು ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಲಾಗುತ್ತದೆ. ಈ ವೇಳೆ ವಿದ್ಯಾರ್ಥಿಯಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದರೆ ಅವರನ್ನು ಪ್ರತ್ಯೇಕವಾಗಿರಿಸಿ ಪರೀಕ್ಷೆ ನೀಡಲಾಗುತ್ತದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ ಮಾಡಲಾಗುವುದು. ಒಬ್ಬ ವಿದ್ಯಾರ್ಥಿಯೂ ಪರೀಕ್ಷೆಯಿಂದ ವಂಚಿತರಾಗದಂತೆ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಆನ್‍ಲೈನ್ ಶಿಕ್ಷಣ ರದ್ದುಗೊಳಿಸುವ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆನ್‍ಲೈನ್ ಶಿಕ್ಷಣವನ್ನು ರದ್ದುಗೊಳಿಸಬೇಕು ಎಂದು ಬಹಳ ಒತ್ತಡ ಬರುತ್ತಿದ್ದು, ಹೀಗಾಗಿ ಎಲ್‍ಕೆಜಿ ಯುಕೆಜಿ ಸೇರಿದಂತೆ ಪ್ರಾಥಮಿಕ ಹಂತದಲ್ಲಿ ನಡೆಯುತ್ತಿರುವ ಆನ್‍ಲೈನ್ ಶಿಕ್ಷಣವನ್ನು ಈ ಕೂಡಲೇ ನಿಲ್ಲಿಸಬೇಕು. ಹಾಗೂ ಆನ್‍ಲೈನ್ ಶಿಕ್ಷಣದ ಹೆಸರಿನಲ್ಲಿ ಫೀಸ್ ಪಡೆಯುತ್ತಿರುವುದನ್ನು ನಿಲ್ಲಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ.