ಚಿಕ್ಕಮಗಳೂರು : ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಖಾಸಗೀ ಶಾಲೆಗಳ ಶಿಕ್ಷಕರಿಗೆ ಆರ್ಥಿಕ ಪ್ಯಾಕೇಜ್ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯ…

161
firstsuddi

ಚಿಕ್ಕಮಗಳೂರು : ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಖಾಸಗೀ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂಧಿಗಳಿಗೆ ರಾಜ್ಯ ಸರ್ಕಾರ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಜಿಲ್ಲಾ ಅನುದಾನ ರಹಿತ ಖಾಸಗೀ ಶಾಲೆಗಳ ಸಂಘ ಒತ್ತಾಯಿಸಿದೆ.
ಕಡೂರು ಶಾಸಕ ಬೆಳ್ಳಿಪ್ರಕಾಶ್ ಅವರನ್ನು ಗುರುವಾರ ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಲಾಕ್‍ಡೌನ್‍ನಿಂದಾಗಿ ಖಾಸಗೀ ಅನುದಾನ ರಹಿತ ಶಾಲೆಗಳು ಕಳೆದ 4 ತಿಂಗಳಿನಿಂದ ಸ್ಥಗಿತಗೊಂಡಿವೆ, ವಿದ್ಯಾರ್ಥಿಗಳ ಶುಲ್ಕ ಪಾವತಿಯಾಗದಿರುವುದು ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಆ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶುಲ್ಕವನ್ನು ರಾಜ್ಯ ಸರ್ಕಾರ ಪಾವತಿಸದ ಹಿನ್ನೆಲೆಯಲ್ಲಿ ಆ ಶಾಲೆಗಳು ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದು, ಶಿಕ್ಷಕರು ಮತ್ತು ಸಿಬ್ಬಂಧಿಗಳಿಗೆ ವೇತನ ನೀಡಲು ಪರದಾಡುತ್ತಿವೆ ಎಂದು ಅಳಲು ತೋಡಿಕೊಂಡರು.
ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಕಡ್ಡಾಯ ಶಿಕ್ಷಣ ಕಾಯ್ದೆಯಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶುಲ್ಕವನ್ನು ತಕ್ಷಣ ಪಾವತಿಸಬೇಕು, ಖಾಸಗಿ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕಗಳನ್ನು ವಿತರಿಸಬೇಕು, ಸಾರ್ವಜನಿಕ ಶಿಕ್ಷಣ ಇಲಾಖೆ 6ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೊಳಿಸುವಂತೆ ಹಾಕುತ್ತಿರುವ ಒತ್ತಡಗಳನ್ನು ಮತ್ತು ಷರತ್ತುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳ ಸಂಘದ ಅಧ್ಯಕ್ಷ ಬಿ.ಹೆಚ್.ನರೇಂದ್ರ ಪೈ, ಗೌರವಾಧ್ಯಕ್ಷ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಾರ್ಯಾಧ್ಯಕ್ಷ ಎಂ.ಎನ್.ಷಡಕ್ಷರಿ, ಕಾರ್ಯದರ್ಶಿ ನಂದಕುಮಾರ್, ನಿರ್ದೇಶಕರಾದ ಕೆ.ಸಿ.ಶಂಕರ್, ಕುಮಾರ್ ಶಾಸ್ತ್ರಿ, ರಾಜೇಶ್, ಶಂಕರ್ ಹಾಜರಿದ್ದರು.