ಚಿಕ್ಕಮಗಳೂರು : ಸಾಹಿತ್ಯ ಕ್ಷೇತ್ರಕ್ಕೆ ಪ್ರಾಮಾಣಿಕವಾಗಿ ಕಾಲಿಡುವವರು ಜಾತಿ ಬುದ್ದಿಯನ್ನು ಬಿಟ್ಟಿರಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಸಲಹೆ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೆನರಾ ಬ್ಯಾಂಕಿನ ಸಹಯೋಗದೊಂದಿಗೆ ತಾಲ್ಲೂಕಿನ ಗಾಳಿಹಳ್ಳಿಯ ಶ್ರೀ ಸಿದ್ದೇಶ್ವರಸ್ವಾಮಿ ಮಠದಲ್ಲಿ ಏರ್ಪಡಿಸಿದ್ದ ಕವಿ-ಕಾವ್ಯ-ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತಿಯಾಗುವವರು ತಮಗೆ ಅನಿಸಿದ್ದನ್ನು ತಮ್ಮ ಅನುಭವದ ಮೂಸೆಯಲ್ಲಿ ನೇರವಾಗಿ ನುಡಿಯುವುದನ್ನು ಕಲಿತಿರಬೇಕು, ಅವರ ಬರವಣಿಗೆಗೂ, ಅವರ ಸಾಹಿತ್ಯಕ್ಕೂ ಹಾಗೂ ಅವರ ಬದುಕಿಗೂ ನೇರವಾದ ಪ್ರಾಮಾಣಿಕತೆ ಇರಬೇಕು, ಈ ಮೂರೂ ಇಲ್ಲದಿರುವವರಿಗೆ ಸಾಹಿತ್ಯ ಕ್ಷೇತ್ರ ಉಪಯೋಗವಾಗುವುದಿಲ್ಲ ಅದು ಕೇವಲ ಹೊಟ್ಟೆಪಾಡಿಗಾಗಬಹುದು ಎಂದರು.
ಇಂದಿನ ಕೊರೋನಾ ಸಂದರ್ಭದಲ್ಲಿ ಇರುವಷ್ಟು ದಿನ ನಮ್ಮದು, ಏನಾದರೂ ವೈದ್ಯರು ಬಂದು ತಲೆಯ ಮೇಲೆ ಕೈಯಿಟ್ಟರೆ ಇರುವಷ್ಟು ಹೊತ್ತು ಮಾತ್ರ ನಮ್ಮದು ಹಾಗಾಗಿ ನಾವು ಇರುವಷ್ಟು ದಿನ ಇರುವಷ್ಟು ಹೊತ್ತು ಸಮಾಜಮುಖಿಯಾಗಿರಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಕನ್ನಡದ ಸಾಹಿತ್ಯ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಅವಧಿಯಲ್ಲಿ ಜಿಲ್ಲಾದ್ಯಂತ ಅವಿರತವಾಗಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಹೇಳಿದರು.
ಇದೇ ವೇಳೆ 6 ಜನ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು, ನಂತರ ಮುದ್ದುರಾಮನ ಪದ್ಯಗಳ ಕುರಿತು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ಸಾಹಿತಿಗಳೊಂದಿಗೆ ಸಂವಾದ ನಡೆಯಿತು.
ಇತ್ತೀಚೆಗೆ ನಿಧನರಾದ ಸಾಹಿತಿ ಕಾದಂಬರಿಗಾರ್ತಿ ಡಾ|| ಗೀತಾ ನಾಗಭೂಷಣ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ, ಖಜಾಂಚಿ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್, ತಾಲ್ಲೂಕು ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಶ್ರೀ ಮಠದ ಅರ್ಚಕ ದಯಾನಂದ ಶಾಸ್ತ್ರಿ, ಉಪನ್ಯಾಸಕ ತ್ಯಾಗರಾಜ್, ಸಾಹಿತಿಗಳಾದ ನಾಗಶ್ರೀ ತ್ಯಾಗರಾಜ್, ಮಲ್ಲಿಕಾರ್ಜುನ ಹುಳಿಕೆರೆ, ಪ್ರಶಾಂತ್, ಆರ್.ಪ್ರಕಾಶ್, ರಮೇಶ್ ಬೊಂಗಾಳೆ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಸಾಹಿತ್ಯ ಕ್ಷೇತ್ರಕ್ಕೆ ಪ್ರಾಮಾಣಿಕವಾಗಿ ಕಾಲಿಡುವವರು ಜಾತಿ ಬುದ್ದಿಯನ್ನು ಬಿಟ್ಟಿರಬೇಕು : ಹಿರೇಮಗಳೂರು ಕಣ್ಣನ್.










