ಮೂಡಿಗೆರೆ : ವಿಧಾನ ಪರಿಷತ್ ಸದಸ್ಯರಿಗೆ ಕೊರೋನಾ ಪಾಸಿಟಿವ್ ಹಿನ್ನೆಲೆ-ಶಾಸಕರು ಸೇರಿದಂತೆ ಹಲವರಿಗೆ ಹೋಂ ಕ್ವಾರಂಟೈನ್…

328
firstsuddi

ಮೂಡಿಗೆರೆ : ವಿಧಾನ ಪರಿಷತ್ ಸದಸ್ಯರು, ಅವರ ಕುಟುಂಬಸ್ಥರು ಹಾಗೂ ಕಾರಿನ ಡ್ರೈವರ್ ಸಾರಿದಂತೆ ನಾಲ್ವರಿಗೆ ಕೊರೋನಾ ಸೋಕು ದೃಢಪಟ್ಟ ಹಿನ್ನೆಲೆಯಲ್ಲಿ ತಾಲ್ಲೂಕಿನ ಶಾಸಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಪತ್ರಕರ್ತರುಗಳು ಸೇರಿದಂತೆ ಮೂಡಿಗೆರೆ ತಾಲ್ಲೂಕು ಪಂಚಾಯತಿಯ ನೌಕರರನ್ನು 15 ದಿನಗಳ ಕಾಲ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ.
ಜೂನ್.29 ರಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಮೂಡಿಗೆರೆಯ ತಾ.ಪಂ. ಆವರಣದಲ್ಲಿರುವ ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಸಲಾಗಿತ್ತು. ಇದಾದ ಬಳಿಕ ಬೆಂಗಳೂರಿಗೆ ಹೋಗಿ ಬಂದಿದ್ದ ವಿಧಾನ ಪರಿಷತ್ ಸದಸ್ಯರಿಗೆ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಭಾನುವಾರದಂದು ಚಿಕ್ಕಮಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಿಂದಿನ ಕೆಡಿಪಿ ಸಭೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಲಾಕ್‍ಡೌನ್ ಅವಧಿಯಲ್ಲಿ ಮೂಡಿಗೆರೆ ಪ್ರವಾಸದ ನಡುವೆ ಪರಿಷತ್ ಸದಸ್ಯರು ನೇರವಾಗಿ ಪಾಲ್ಗೊಂಡಿದ್ದರಿಂದ ಹಲವರಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಡಿಪಿ ಸಭೆ ಹಾಗು ಪ್ರವಾಸದಲ್ಲಿ ಪಾಲ್ಗೊಂಡ ಎಲ್ಲರನ್ನೂ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಮಾಡುವಂತೆ ಜಿಲ್ಲಾಡಳಿತ ಸೂಚಿಸಿದ ಹಿನ್ನೆಲೆಯಲ್ಲಿ ಹಲವರಿಗೆ ಹೋಂ ಕ್ವಾರಂಟೈನ್ ಮಾಡುವಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ನಿರತರಾಗಿದ್ದಾರೆ.
200 ಕ್ಕೂ ಹೆಚ್ಚು ಜನರ ಹೋಂ ಕ್ವಾರಂಟೈನ್ ಅವಶ್ಯಕತೆ ಇದೆ : ಪಸ್ತುತ ನಡೆಯಲಾಗಿದೆ ಎನ್ನಲಾದ ತಾ.ಪಂ.ಕೆಡಿಪಿ ಸಭೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ತಾಲ್ಲೂಕು ಪ್ರವಾಸದಲ್ಲಿ ಮೂಡಿಗೆರೆ ಶಾಸಕರು, ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾ ಅಧಿಕಾರಿ, ತಹಶೀಲ್ದಾರ್, ಜಿಲ್ಲಾ ಪಂಚಾಯತಿ ಹಾಗೂ ತಾ.ಪಂ ಸದಸ್ಯರುಗಳು, ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು, ಪತ್ರಕರ್ತರುಗಳು ಸೇರಿದಂತೆ 200 ಕ್ಕೂ ಹೆಚ್ಚು ಜನರ ಮೇಲೆ ನಿಗಾ ವಹಿಸುವ ಹೊಣೆಗಾರಿಗೆ ಆರೋಗ್ಯ ಇಲಾಖೆಯ ಮೇಲಿದೆ.

ಪತ್ರಕರ್ತರುಗಳಿಗೆ ರಕ್ಷಣೆ ಇಲ್ಲ : ಪತ್ರಕರ್ತರುಗಳಿಗೆ ಕೋವಿಡ್ ವಿರುದ್ಧ ಯಾವುದೇ ರಕ್ಷಣೆ ನೀಡಲಾಗುತ್ತಿಲ್ಲ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯ ಕಾರ್ಯದರ್ಶಿ ಕೆಸವಳಲು ರಾಘವೇಂದ್ರ ಅವರು ಗಂಭೀರವಾಗಿ ಆರೋಪ ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳಿಗೆ ಸೋಂಕು ತಗುಲಿದರೆ ಸರ್ಕಾರ ಅವರ ಚಿಕಿತ್ಸಾ ವೆಚ್ಚವನ್ನು ನೋಡಿಕೊಳ್ಳುತ್ತದೆ. ಆದರೆ ತಮ್ಮ ವೃತ್ತಿಯನ್ನು ಜವಾಬ್ದಾರಿ ಯುತವಾಗಿ ನಿರ್ವಹಣೆ ಮಾಡುತ್ತಿರುವ ಜೀವಕ್ಕೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಪತ್ರಕರ್ತರುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದರ ಜೊತೆಗೆ ಹೋಂ ಕ್ವಾರಂಟೈನ್ ಅವಧಿಯಲ್ಲಿ ಪತ್ರಕರ್ತರುಗಳ ಜೀವನ ನಿರ್ವಹಣೆಗೆ ಅವಶ್ಯವಿರುವ ಎಲ್ಲಾ ಸಾಮಗ್ರಿಗಳನ್ನು ಉಚಿತವಾಗಿ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ಒಟ್ಟಾರೆ ಸದಾ ಜನಸಂಪರ್ಕದಲ್ಲಿ ಇರುತ್ತಿದ್ದ ನಾಯಕರೊಬ್ಬರಿಗೆ ಸೋಂಕು ತಗುಲಿದ ನೋವಿನಲ್ಲಿ ಪಕ್ಷದ ಕಾರ್ಯಕರ್ತರುಗಳಿದ್ದರೆ, ಸೋಕಿತರ ಸಂಪರ್ಕದಲ್ಲಿರುವ ಇಷ್ಟೊಂದು ಜನರಿಗೆ ಸೋಂಕು ದೃಢಪಟ್ಟರೆ ಕಥೆ ಏನು ಎಂಬುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಇತ್ತ ವಿಧಾನ ಪರಿಷತ್ ಸದಸ್ಯರ ಕಛೇರಿ ಕೂಡ ತಾ.ಪಂ ಆವರಣದಲ್ಲಿ ಇರುವುದರಿಂದ ತಾ.ಪಂಯನ್ನು ಸೀಲ್‍ಡೌನ್ ಮಾಡುವ ಸಾಧ್ಯತೆ ದಟ್ಟವಾಗಿದೆ.