- ರಾಘವೇಂದ್ರ ಕೆಸವಳಲು
ಶಾಲೆಯಲ್ಲಿ ಶಿಕ್ಷಕ ಎಲ್ಲಾ ಮಕ್ಕಳಿಗೆ ನೀವು ದೊಡ್ಡವರಾದ ಮೇಲೆ ಏನಾಗುತ್ತೀರಾ ಎಂದು ಪ್ರಶ್ನೆ ಕೇಳ್ತಿದ್ದಾರೆ. ಮಕ್ಕಳು ನಾನು ಇಂಜಿನಿಯರ್, ಡಾಕ್ಟರ್ ಅಂತೆಲ್ಲಾ ಹೇಳೋದ್ನ ಕೇಳಿ ಶಿಕ್ಷಕನಿಗೆ ಸಂತೋಷವಾಗುತ್ತಿದೆ. ಯಾರೂ ಕೂಡ ನಾನು ಶಿಕ್ಷಕನಾಗ್ತೀನಿ ಅಂತ ಹೇಳಲೇ ಇಲ್ಲ. ಆ ಶಿಕ್ಷಕನಿಗೆ ಬೇಕಾಗಿದ್ದು ಅದೇ. ಆದರೆ, ಕೊನೆಗೊಬ್ಬ ಬಾಲಕ ಎದ್ದು ನಿಂತು, ಸರ್ ನಾನು ಶಿಕ್ಷಕನಾಗ್ತೀನಿ ಎಂದ. ಆ ಮಗುವಿಗೆ ಶಿಕ್ಷಕ ಹೇಳಿದ್ದು ಒಂದೇ ಮಾತು. ಶಿಕ್ಷಕನಾಗೋದಾದ್ರೆ ಸರ್ಕಾರಿ ಶಾಲೆಯಲ್ಲಿ ಆಗು, ಖಾಸಗಿಯಲ್ಲಿ ಶಾಲೆಯಲ್ಲಿ ಬೇಡ ಅಂದ್ರು. ಆ ಮಗು ಕೂತ್ಕೊಂತು. ಶಿಕ್ಷಕ ನಿಂತೇ ಇದ್ದ. ತನ್ನ ಸ್ಥಿತಿಯನ್ನ ನೆನೆದು ತನ್ನೊಳಗೆ ತಾನೇ ಅಳುತ್ತಿದ್ದ. ಮನೆಗೆ ಹೋದ್ರೆ ಹೆಂಡತಿ ಓನರ್ ಬಾಡಿಗೆ ಕೇಳುದ್ರು ಅಂತಾರೆ. ಮಕ್ಕಳು ಅಪ್ಪ… ಶಾಲೆಯಲ್ಲಿ ಫೀಸ್ ಕೇಳುದ್ರು ಅಂತಾರೆ. ಎದುರಿಗೆ ಸಿಕ್ಕ ಸ್ನೇಹಿತ ಸಾಲ ಕೇಳ್ತಾನೆ. ತನ್ನ ಸ್ಥಿತಿಯನ್ನ ತಾನೇ ನೆನೆದು ಗದ್ಗದಿತನಾದ ಶಿಕ್ಷಕ ಮೊಗದಲ್ಲಿ ಮಂದಹಾಸದೊಂದಿಗೆ ಮಕ್ಕಳ ಜೊತೆ ಮಕ್ಕಳಾಗ್ತಾನೆ.
ಇದೊಂದು ಸಾಂದರ್ಭಿಕ ಕಲ್ಪನೆಯಷ್ಟೆ. ಆದರೆ, ಪ್ರಸ್ತುತ ಖಾಸಗಿ ಶಾಲೆಯ ಶಿಕ್ಷರ ಬದುಕಿಗೆ ಹೇಳಿ ಮಾಡಿಸಿದಂತಿದೆ. ಯಾಕಂದ್ರೆ, ಅದೊಂದು ಶಿಕ್ಷಕ ದಂಪತಿ ಕುಟುಂಬ. ಇಬ್ಬರು ಮಕ್ಕಳು. ಕೊರೋನದಿಂದ ಶಾಲೆಗೆ ಬೀಗ ಬಿದ್ದಿದೆ. ಈ ಖಾಸಗಿ ಶಾಲೆಯ ಶಿಕ್ಷಕರ ಬದುಕಿಗೆ ಬರಸಿಡಿಲು ಬಡಿದಿದೆ. ಹೌದು, ಚಿಕ್ಕಮಗಳೂರು ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕ ದಂಪತಿ ಬದುಕು ಕಟ್ಟಿಕೊಂಡಿದೆ. ಚಿಕ್ಕ ಸಂಸಾರ ಚೊಕ್ಕ ಸಂಸಾರವಾಗಿತ್ತು. ಆದರೆ, ಇವರೊಬ್ಬರೇ ಅಲ್ಲ. ಇವರಂತ ಸಾವಿರಾರು ಕುಟುಂಬದ ಮೇಲೆ ಕೊರೋನ ಕರಿನೆರಳು ದಟ್ಟವಾಗಿ ಬಿದ್ದಿದೆ. ಸಂಬಳ ಇಲ್ಲದೆ ನಾಲ್ಕು ತಿಂಗಳಾಯ್ತು. ಅದೇ ನಾಲ್ಕು ತಿಂಗಳಿಂದ ಬಾಡಿಗೆ ಕಟ್ಟಿಲ್ಲ. ರೇಷನ್ ಅಂಗಡಿಯವನು ನೋಡುದ್ರು ನೋಡದಂತೆ ವರ್ತಿಸ್ತಾನೆ. ಮಕ್ಕಳ ಶಾಲೆಯವರು ಕಳೆದ ವರ್ಷದ ಫೀಸ್ನಲ್ಲಿ ಸ್ವಲ್ಪ ಬಾಕಿ ಇತ್ತು ಯಾವಾಗ ಕಟ್ಟುತ್ತೀರಾ ಎಂದು ಫೋನ್ ಮಾಡ್ತಾರೆ. ಈ ವರ್ಷ ಅಡ್ಮಿಷನ್ ಮಾಡಿಸಿ ಎಂದು ಕೇಳುತ್ತಾರೆ. ಆ ಶಿಕ್ಷಕ ದಂಪತಿಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗಿದೆ. ಬಹುಶಃ ಈ ಕೊರೋನ ಹೆಮ್ಮಾರಿಗೆ ಖಾಸಗಿ ಶಾಲೆಯ ಶಿಕ್ಷಕರು ಹಾಕಿದಷ್ಟು ಶಾಪವನ್ನ ಮತ್ಯಾರೂ ಹಾಕಿಲ್ಲ ಅನ್ನಿಸುತ್ತೆ.
ನಿಜ, ಕೊರೋನ ಕರುನಾಡಿಗೆ ಕಾಲಿಟ್ಟಾಗಿನಿಂದ ಸರ್ಕಾರ, ಸಂಘಸಂಸ್ಥೆಗಳು ಬಹುತೇಕ ಎಲ್ಲಾ ವರ್ಗದ ಜನರಿಗೆ ಸಹಾಯ ಮಾಡಿದ್ದಾರೆ. ಕೂಲಿ ಕಾರ್ಮಿಕರಿಗೆ ಮನೆ-ಮನೆಗೆ ರೇಷನ್ ತಲುಪಿಸಿದ್ದಾರೆ. ಬಡವರು-ಶ್ರೀಮಂತರ ಮಕ್ಕಳಿಗೆ ಯಾವುದೇ ಬೇಧ-ಭಾವವಿಲ್ಲದೆ, ನಮ್ಮೆಲ್ಲಾ ನೋವು-ಕಷ್ಟಗಳನ್ನ ಮನೆಯಲ್ಲೇ ಬಿಟ್ಟು ಹೋಗಿ ಮಕ್ಕಳಿಗೆ ಪಾಠ ಮಾಡಿ ಅವರಿಗೊಂದು ದಡ ಮುಟ್ಟಿಸೋ ನಾವು ಕೂಲಿ ಕಾರ್ಮಿಕರಿಗಿಂತ ಕಡೆಯಾದ್ವಲ್ಲ ಎಂದು ಆ ದಂಪತಿಯ ಕಣ್ಣಿನ ಒಂದು ಬದಿಯಿಂದ ಎರಡು ಹನಿ ಜಾರಿ ಬಿದ್ದವು. ಮತ್ತೊಬ್ಬರ ಬಳಿ ಅಕ್ಕಿ-ಬೇಳೆ-ಎಣ್ಣೆ ಕೇಳೋದಕ್ಕೆ ಸ್ವಾಭಿಮಾನ ಅಡ್ಡಬರುತ್ತೆ. ಶಿಕ್ಷಕರು ಸ್ವಾಭಿಮಾನಿಗಳಾಗಿದ್ದಾಗ ಮಾತ್ರ ಮಕ್ಕಳಲ್ಲಿ ಸ್ವಾಭಿಮಾನದ ಗುಣ ತುಂಬೋದಕ್ಕೆ ಸಾಧ್ಯ ಅನ್ನೋದು ನಮ್ಮ ಭಾವನೆ ಸರ್ ಅಂದ್ರು. ಆದರೆ, ಖಾಸಗಿ ಶಾಲೆಯ ಶಿಕ್ಷಕರು ಎಂತಹಾ ಕಷ್ಟದಲ್ಲಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ. ಮೂರು ತಿಂಗಳಿಂದ ಸಂಬಳ ಇಲ್ಲ. ಮನೆಯಲ್ಲಿ ಕಷ್ಟವನ್ನ ಹೇಳುವಂತಿಲ್ಲ ಎಂದು ಮೌನಕ್ಕೆ ಜಾರಿದ್ರು.
ಸರ್ಕಾರ ಸರ್ಕಾರಿ ಶಿಕ್ಷಕರಿಗೆ ಸಂಬಳ ನೀಡುತ್ತೆ. ಕೊರೊನದಿಂದ ಲಾಕ್ಡೌನ್ ಆದ ಮೇಲೂ ಅವರಿಗೆ ಸಂಬಳ ಕೊಡ್ತು. ನಿರ್ಗತಿಕರಿಗೆ ರೇಷನ್ ಕಿಟ್ ಕೊಡ್ತು. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಅಕ್ಕಿ ಕೊಡ್ತು. ಬಹುತೇಕ ಎಲ್ಲಾ ವರ್ಗದ ಜನರಿಗೂ ಒಂದಲ್ಲ ಒಂದು ರೀತಿ ಸಹಾಯ ಮಾಡ್ತು. ಖಾಸಗಿ ಶಾಲೆಯ ಶಿಕ್ಷಕರಿಗೆ ಏನು ಮಾಡಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು. ಸಚಿವರು, ಶಾಸಕರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿಲ್ಲ. ಅವರು ಓದಿರೋದು ಖಾಸಗಿ ಶಾಲೆಯಲ್ಲಿ. ಅವರ ಮಕ್ಕಳಿಗೆ ಪಾಠ ಮಾಡಿರೋದು ನಮ್ಮಂಥ ಶಿಕ್ಷಕರೇ. ಈಗ ಅವರು ದೊಡ್ಡವರಾದ ಮೇಲೆ ಅದನ್ನೆಲ್ಲಾ ಮರೆತಿದ್ದಾರೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ತೋಡಿಕೊಂಡರು. ಖಾಸಗಿ ಶಾಲೆಯಲ್ಲಿ ಬದುಕಿನ ಬಂಡಿ ಸಾಗಿಸುವ ಸಂಬಳಕ್ಕೆ ಕಮಿಟ್ ಆಗಿ ಮಕ್ಕಳಲ್ಲಿ ಮಕ್ಕಳಾಗಿ ಅವರಿಗೊಂದು ಬದುಕು ಕಟ್ಟಿಕೊಡ್ತೀವಿ. ಆದ್ರೆ, ನಮ್ಮ ಬದುಕು ನಟ್ಟ ನಡುಬೀದಿಗೆ ಬಂದು ನಿಂತಾಗ. ಯಾರೂ ಬರಲಿಲ್ಲ. ಯಾವ ಸರ್ಕಾರಗಳು ಬರಲಿಲ್ಲ, ನಮ್ಮದ್ದು ಒಂದು ಬದುಕ ಸರ್ ಎಂದು ತಮ್ಮನ್ನ ತಾವೇ ಶಪಿಸಿಕೊಂಡರು.

ಶಾಲೆಗೆ ಹೋಗಿ ಸಂಬಳ ಕೇಳಿದ್ರೆ, ಆಡಳಿತ ಮಂಡಳಿ ಎಲ್ಲಿಂದ ಕೊಡಲಿ ಅಂತಾರೆ. ಅವರ ಕಷ್ಟ ನಮಗೆ ಅರ್ಥವಾಗುತ್ತೆ. ಅವರ ಸ್ಥಿತಿಯನ್ನ ನಾವು ಕಣ್ಣಾರೆ ಕಂಡಿದ್ದೇವೆ. ಅವರು ನಮಗಿಂತ ಜಾಸ್ತಿ ಕಷ್ಟ ಹೇಳಿಕೊಳ್ತಾರೆ. ಅದು ಸತ್ಯ ಕೂಡ. ಮಕ್ಕಳ ಪೋಷಕರು ಕಟ್ಟುವ ಫೀಸ್ನಲ್ಲಿ ಬಾಕಿ ಉಳಿದಿದೆ. ಕಳೆದ ವರ್ಷದ ಹಣವೇ ಬಂದಿಲ್ಲ. ಈ ವರ್ಷ ಸ್ಕೂಲ್ ಆರಂಭ ಯಾವಾಗಲೋ ಎಂದು ಹೇಳಿ ಕಳಿಸುತ್ತಾರೆ. ಯಾರ ಬಳಿಯಾದ್ರು ಹಣ ಕೇಳೋಣ ಅಂದ್ರೆ ಎಲ್ಲರದ್ದು ಒಂದೇ ಮಾತು. ವ್ಯವಹಾರ ಇಲ್ಲ. ದುಡಿಮೆ ಇಲ್ಲ ಅನ್ನೋದು. ಮನೆಗೆ ಹೋದ್ರೆ ಹೊಟ್ಟೆ ತುಂಬಾ ಊಟ ಮಾಡೋಕು ಕಷ್ಟ. ಮಕ್ಕಳು ಏನಾದ್ರು ಬೇಕು ಅಂದ್ರೆ ತಂದು ಕೋಡೋದಕ್ಕೂ ಯೋಚಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಭಾವೋದ್ವೇಗಕ್ಕೆ ಒಳಗಾದ್ರು. ಸರ್ಕಾರ ಖಾಸಗಿ ಶಾಲೆಗಳಲ್ಲಿ ಪೋಷಕರು ಉಳಿಸಿಕೊಂಡಿರೋ ಬಾಕಿ ಹಣವನ್ನ ಕಟ್ಟಲು ಅನುಮತಿ ಕೊಡಿಸಿದ್ರೆ ನಮಗೆ ಸಂಬಳವಾದ್ರು ಸಿಕ್ತಿತ್ತು ಎಂಬ ಮಾತು ಸಾವಿರಾರು ಮಕ್ಕಳು ಬದುಕು ರೂಪಿಸಿದ ಶಿಕ್ಷಕರ ಬಾಯಲ್ಲಿ ಬಂದಾಗ ನಾನು ಕೂಡ ಮೂಕವಿಸ್ಮಿತನಾದೆ. ಕೊರೊನ ಕಾಲದಲ್ಲಿ ಜನ ಕಷ್ಟದಲ್ಲಿ ಇರುವಾಗ ಇವರು ಪೋಷಕರು ಹಣ ಕಟ್ಟಿದ್ರೆ ನಮಗೆ ಸಂಬಳ ಸಿಕ್ತಿತ್ತು ಎಂದು ಸ್ವಾರ್ಥಿಗಳಂತೆ ವರ್ತಿಸಿದ್ರು, ಅವರ ಸ್ವಾರ್ಥದ ಮಾತಿನಲ್ಲಿ ಅವರ ಕಷ್ಟ-ನೋವು ಅನಾವರಣಗೊಂಡಿತ್ತು.
ಇವ್ರು ಯಾರು ಅಂತ ನನಗೂ ಗೊತ್ತಿಲ್ಲ. ಯಾವುದೋ ಕೆಲಸದ ನಿಮಿತ್ತ ಮೊನ್ನೆ ಶಿವಮೊಗ್ಗ ಹೋಗಿದ್ದೆ. ಅಲ್ಲಿಂದ ವಾಪಸ್ಸು ಬರುವಾಗ ತರೀಕೆರೆ ಸಮೀಪದ ಎಂ.ಸಿ ಹಳ್ಳಿಯಲ್ಲಿ ನೀರಿನ ಬಾಟಲಿಗೆಂದು ಕಾರು ನಿಲ್ಲಿಸಿದೆ. ಕಾರಿನಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಆ ದಂಪತಿ ಸರ್, ಬಸ್ಸಿಲ್ಲ ಸ್ವಲ್ಪ ಡ್ರಾಪ್ ಮಾಡಿ ಅಂದರು. ಸರಿ ಬನ್ನಿ ಎಂದು ನಾನು ಅವರನ್ನು ಕಾರಿನಲ್ಲಿ ಕೂರಿಸಿಕೊಂಡಾಗ ಮಾತನಾಡುವಾಗ ಅವರು ತಮ್ಮ ನೋವಿನ ಜೊತೆ ಖಾಸಗಿ ಶಾಲೆಯ ಶಿಕ್ಷಕರ ಕಷ್ಟ ಹಾಗೂ ಕಾರ್ಪಣ್ಯದ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಅವರು ಹೇಳಿದ ಮೇಲೆ ಕೊರೋನ ಕಾಲದಲ್ಲಿ ಖಾಸಗಿ ಶಾಲೆಯ ಶಿಕ್ಷಕರ ಪರಿಸ್ಥಿತಿ ನನಗೆ ಅರಿವಾದದ್ದು. ನಾಳೆಯೇ ಅವರ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ನಾನು ಹೇಳುವುದಿಲ್ಲ. ಆದರೆ ಅವರ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೇ ಎಂಬ ಸಣ್ಣ ನಿರೀಕ್ಷೆಯಲ್ಲಿ ಈ ಬರವಣಿಗೆ….

ತನ್ನನ್ನು ತಾನೇ ಉರಿಸಿಕೊಂಡು ಇತರರಿಗೆ ಬೆಳಕು ನೀಡುವ ಮೇಣದ ಬತ್ತಿಯಂತೆ ತಮ್ಮ ಕಷ್ಟಗಳ ಮಧ್ಯೆಯೂ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕ ವೃಂದಕ್ಕೆ ಹ್ಯಾಟ್ಸಾಫ್….










