ಮೂಡಿಗೆರೆ : ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ತಾಲ್ಲೂಕಿನ ಗೋಣಿಬೀಡಿನ ಮೇಲುಕೋಟೆ ಮಸೀದಿ ಬಳಿ ನಡೆದಿದೆ. ಬಂಧಿತರನ್ನು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮೋಹಿದ್ ಖಾನ್, ಮೂಡಿಗೆರೆ ತಾಲ್ಲೂಕಿನ ಅಕ್ಬರ್ ಪಾಷಾ, ಶಾಹಿದ್ ಖಾನ್ ಹಾಗೂ ಪ್ರಭ ಎಂದು ಗುರುತಿಸಲಾಗಿದ್ದು, ಬಂಧಿತರಿಂದ 50 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣದ ಪಾಲೇರು ಬಳಿಯ ಶೇಖರ್ ಎಂಬುವವರಿಂದ 80 ಕೆಜಿ ಗಾಂಜಾ ಸೊಪ್ಪನ್ನು ತಂದಿದ್ದು, ಅದರಲ್ಲಿ 30 ಕೆಜಿ ಸೊಪ್ಪನ್ನು ಹಾಸನ ಹಾಗೂ ಸಕಲೇಶಪುರದಲ್ಲಿ ಮಾರಾಟ ಮಾಡಿದ್ದಾರೆ. ಬಳಿಕ ಉಳಿದ 50 ಕೆಜಿ ಗಾಂಜಾ ಸೊಪ್ಪನ್ನು ಮಂಗಳೂರಿನಲ್ಲಿ ಮಾರಾಟ ಮಾಡಲು ಮಾರುತಿ 800 ಕಾರಿನಲ್ಲಿ ಸಾಗಿಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿಯನ್ನು ತಿಳಿದ ಜಿಲ್ಲೆಯ ಸಿಇಎನ್ ಠಾಣೆ ಇನ್ಸ್ ಪೆಕ್ಟರ್ ರಕ್ಷಿತ್, ಪಿಎಸ್ಐ ರಮ್ಯಾ ಹಾಗೂ ಗೋಣಿಬೀಡು ಪೊಲೀಸರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ 50ಕೆಜಿ ಗಾಂಜಾ, ಕಾರು ಮತ್ತು ಬೈಕನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಪ್ರಕರಣದಲ್ಲಿ 10ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.










